ಸೋಮವಾರಪೇಟೆ,ಜ.6: ಶ್ರೀ ಸುಬ್ರಾಯ, ಮಂಜುನಾಥ, ಕಾಳತ್ತಮ್ಮೆ, ಕ್ಷೇತ್ರಪಾಲ ದೇವರುಗಳು ನೆಲೆಯಾದ ನಾಡು, ಟಿಪ್ಪುವಿನೊಂದಿಗೆ ಹೋರಾಡಿದ ಶೂರರ ಪರಾಕ್ರಮದ ಇತಿಹಾಸ-ಜಾನಪದದ ಶ್ರೀಮಂತಿಕೆಯನ್ನು ಹೊಂದಿರುವ ಬೀಡು, ತಾಲೂಕಿನ ಪಶ್ಚಿಮಘಟ್ಟ ಸಾಲಿನಲ್ಲಿ ಹಸಿರನ್ನೇ ಹೊದ್ದು ಮಲಗಿರುವ ಹಸಿರ ನೆಲೆ ಸೂರ್ಲಬ್ಬಿ ಗ್ರಾಮದಲ್ಲಿ ಇಂದು ಸಾಂಸ್ಕøತಿಕ ಕಲರವದೊಂದಿಗೆ ಕ್ರೀಡಾಹಬ್ಬದ ಸಂಭ್ರಮವೋ ಸಂಭ್ರಮ.ಕರ್ನಾಟಕ ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕ, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಸೂರ್ಲಬ್ಬಿ ನಾಡಿನ ಆಶ್ರಯದಲ್ಲಿ ಅಲ್ಲಿನ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಜಾನಪದ ಕ್ರೀಡೋತ್ಸವ ಕಾರ್ಯಕ್ರಮ, ಸೂರ್ಲಬ್ಬಿ ನಾಡಿನ ಶ್ರೀಮಂತ ಜಾನಪದ ಸಂಸ್ಕøತಿಯನ್ನು ಹೊರ ಜಗತ್ತಿಗೆ ತೋರ್ಪಡಿಸುವಲ್ಲಿ ಯಶಸ್ವಿಯಾಯಿತು.

ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಮಂದಿ ಸ್ಥಳೀಯರೊಂದಿಗೆ ಬೆರೆತು ಅಲ್ಲಿನ ಕಲೆ, ಸಾಹಿತ್ಯ, ಶ್ರೀಮಂತ ಸಂಸ್ಕøತಿ, ಗ್ರಾಮೀಣ ಜಾನಪದ ಆಟಗಳು, ಕೊಡವ ಭಾಷಿಕರ ಆಚಾರ ವಿಚಾರಗಳನ್ನು ಕಂಡು ಸಂಭ್ರಮಿಸಿದರು. ಪುಟಾಣಿಗಳಿಂದ ಹಿಡಿದು ವಯೋವೃದ್ಧರೂ ಸಹ ವಿವಿಧ ಕ್ರೀಡಾಕೂಟಗಳಲ್ಲಿ ಅಮಿತೋತ್ಸಾಹದಿಂದ ಭಾಗವಹಿಸಿ ಸಂಭ್ರಮದಲ್ಲಿ ತೇಲಿದರು.

ಟಿಪ್ಪುವಿನ ಸೈನ್ಯದೊಂದಿಗೆ ಹೋರಾಡಿ ಮಡಿದವರ ನೆನಪಿನಲ್ಲಿ ಕೆತ್ತಲಾಗಿರುವ ವೀರಕಲ್ಲುಗಳಿಗೆ ಬೆಳಿಗ್ಗೆ ಪೂಜೆ ಸಲ್ಲಿಸಿದ ಗ್ರಾಮಸ್ಥರು, ಬೀರಕಲ್ಲಿನಿಂದ ಶಾಲಾ ಆವರಣದವರೆಗೆ ಬಟ್ಟೆಪಾಟ್, ಲೇಲಾಪಾಟ್, ತಾಳ ಸಹಿತ ದುಡಿಕೊಟ್ಟ್, ಸಾಂಪ್ರದಾಯಿಕ ಉಡುಪಿನೊಂದಿಗೆ ಕೋವಿ ಹಿಡಿದು ಮೆರವಣಿಗೆ ನಡೆಸಿದರು.

ನಂತರ ಆರ್ಥಿಕವಾಗಿ ಹಿಂದುಳಿದಿರುವ ಆದರೆ, ಸಾಂಸ್ಕøತಿಕವಾಗಿ ಶ್ರೀಮಂತಿಕೆಯ ಉತ್ತುಂಗದಲ್ಲಿರುವ, ನಾಲ್ಗುಡಿ ದೇವರ ನೆಲೆ, ಧೀರೋದಾತ್ತ ಯೋಧರು, ಹಳೆ ತಲೆಮಾರುಗಳ ಬೀಡು, ಪ್ರಾಕೃತಿಕವಾಗಿ ತನ್ನದೇ ಆದ ವಿಶೇಷತೆಗಳನ್ನು ಹೊಂದಿರುವ ಸೂರ್ಲಬ್ಬಿ ನಾಡಿನಲ್ಲಿ ಜಾನಪದ ಕ್ರೀಡಾ ಚಟುವಟಿಕೆಗಳಿಗೆ ಅತಿಥಿಗಳು ಚಾಲನೆ ನೀಡಿದರು.

ಆಧುನಿಕ ಯುಗದ ಭರಾಟೆಯಲ್ಲಿ ಮೊಬೈಲ್‍ಗಳ ಸ್ಕ್ರೀನ್‍ನೊಳಗೆ ಮುಳುಗಿ ಹೋಗಿರುವ ಪ್ರಸ್ತುತ ಸಮಾಜವನ್ನು ಮತ್ತೆ ಮಣ್ಣಿನಾಟಕ್ಕೆ ಕರೆದೊಯ್ಯುವ, ಜಾನಪದ ಕ್ರೀಡೆಗಳ ಬಗ್ಗೆ ಆಸಕ್ತಿ ಮೂಡಿಸಿ ಯುವ ಜನಾಂಗಕ್ಕೂ ಪರಿಚಯಿಸುವ ನಿಟ್ಟಿನಲ್ಲಿ ವಿನೂತನ ಪ್ರಯತ್ನಕ್ಕೆ ಕೈ ಹಾಕಿರುವ ಜಾನಪದ ಪರಿಷತ್ತಿನ ಕಾರ್ಯಕ್ಕೆ, ನಿತ್ಯಹರಿಧ್ವರ್ಣದಂತಿರುವ ನಾಡಿನ ಜನರೂ ಕೈಜೋಡಿಸಿದ್ದದ್ದು ವಿಶೇಷವಾಗಿತ್ತು.

ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಸಭಾ

(ಮೊದಲ ಪುಟದಿಂದ) ಕಾರ್ಯಕ್ರಮವನ್ನು ಅತಿಥಿಗಳು ಹಾಗೂ ತಕ್ಕ ಮುಖ್ಯಸ್ಥರು ದೀಪಕ್ಕೆ ಅಕ್ಕಿ ಹಾಕುವ ಮೂಲಕ ಉದ್ಘಾಟಿಸಿದರು. ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ. ಅನಂತಶಯನ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಜಾನಪದ ಸಂಶೋಧಕ ಕಾಳೇಗೌಡ ನಾಗವಾರ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್, ಗ್ರಾ.ಪಂ. ಅಧ್ಯಕ್ಷ ಕನ್ನಿಗಂಡ ಸುಭಾಷ್, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಸೂರ್ಲಬ್ಬಿ ನಾಡಿನ ತಕ್ಕರಾದ ಮೇದುರ ಪೂವಯ್ಯ, ಅಧ್ಯಕ್ಷ ಮುದ್ದಂಡ ತಿಮ್ಮಯ್ಯ, ಗ್ರಾ.ಪಂ. ಉಪಾಧ್ಯಕ್ಷ ಚಾಮೇರ ಪಳಂಗಪ್ಪ, ಸದಸ್ಯೆ ತಂಬುಕುತ್ತೀರ ಮಾಯಮ್ಮ, ಮುಖ್ಯೋಪಾಧ್ಯಾಯರುಗಳಾದ ವೆಂಕಟೇಶ್ ನಾಯಕ್, ಸುಂದರಿ, ಕೊಡವ ಟ್ರಸ್ಟ್ ಅಧ್ಯಕ್ಷ ತಮ್ಮು ಪೂವಯ್ಯ, ಕ್ರೀಡಾಕೂಟ ಸಂಚಾಲಕ ಚಾಮೇರ ದಿನೇಶ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸೂರ್ಲಬ್ಬಿ ನಾಡಿನ ಪುರುಷರು ಮತ್ತು ಮಹಿಳೆಯರಿಂದ ಮೂಡಿಬಂದ ಕೊಡವ ಸಾಂಪ್ರದಾಯಿಕ ಬೊಳಕಾಟ್, ಹುತ್ತರಿ ಕೋಲಾಟ್, ಉಮ್ಮತಾಟ್, ಕೋಲ್‍ಮುರಿ ಸೇರಿದಂತೆ ಇನ್ನಿತರ ಪ್ರಾಚೀನ ಕಲೆಗಳ ಪ್ರದರ್ಶನಗಳು ಹೊರ ಊರಿನವರಿಗೆ ಆಶ್ಚರ್ಯದ ನೃತ್ಯಪ್ರಾಕಾರಗಳಂತೆ ಕಂಡುಬಂದು, ಕುತೂಹಲದಿಂದ ವೀಕ್ಷಿಸಿದರು.

ಕ್ರೀಡೋತ್ಸವದಲ್ಲಿ ಪ್ರಾಚೀನ ಜನಜೀವನದ ಅವಿಭಾಜ್ಯ ಅಂಗಗಳಾಗಿದ್ದ ಕುರಿ ಮುಕ್ಕಾಲಿ, ಏಲಕ್ಕಿ ಗುಡೆ, ವಾಲೆ ಪಚ್ಚಿಯ ಕೂಳ್ , ಚಿಬ್ಬಿ, ತೆಂಗೆತೊರಂಡಿ, ಒನಕೆ, ಕಚ್ಚಿ ತಳಿಯ, ಚರಟೆ, ಕೈಕಣಿ, ಚಕ್ಕುಲಿ ವರ, ತೂರತ್‍ರಬ್ಯಾಜ್, ಬೊಗ್‍ಣಿ, ಲ್ಯಾಟೀನ್, ತಾಮ್ರದ ಬಿಂದಿಗೆಗಳು, ತೂರತ್‍ರ್‍ಕುಕ್ಕೆ, ಪೋಳಿಯ, ವನಲಿ ವಸ್ತುಗಳನ್ನು ಗ್ರಾಮದ ಜಯಂತಿ ಅವರು ಪ್ರದರ್ಶನಕ್ಕಿಟ್ಟಿದ್ದರೆ, ಮುಟ್ಲು ಗ್ರಾಮದ ಪುದಿಯತಂಡ ರವಿ ಅವರು ಪೆಟ್ಟಿಗೆ ಜೇನನ್ನು ಇಟ್ಟಿದ್ದರು.

ಇದರೊಂದಿಗೆ ಹಿಂದಿನ ಕಾಲದಲ್ಲಿ ಮನೆಯ ಯಜಮಾನ ಊಟ ಮಾಡುತ್ತಿದ್ದ ಕಂಚಿನ ತಟ್ಟೆಯಂತಿರುವ ಗಂಗಳವನ್ನು ಮುದ್ದಂಡ ನಾಣ್ಯಪ್ಪ ಅವರು ಪ್ರದರ್ಶನಕ್ಕಿಟ್ಟಿದ್ದು, ಹಲವಷ್ಟು ಮಂದಿ ಹಿಂದಿನ ಕಾಲದ ವಿವಿಧ ಬಗೆಯ ವಸ್ತುಗಳನ್ನು ವೀಕ್ಷಿಸಿ ಮಾಹಿತಿ ಪಡೆದರು.

ನಂತರ ಗ್ರಾಮೀಣ ಜಾನಪದ ಕ್ರೀಡೆಗಳಾದ ರೆಗ್ಗೆ, ಚಿಲ್ಕಿ, ಕುಂಟೆಬಿಲ್ಲೆ, ಗೋಣಿತ್ತಾಟ್ ಓಟ, ಚಿಣ್ಣಿದಾಂಡು, ಲಗೋರಿ, ಕಲ್ಲಾಟ, ತೆಂಗೆಪೋರ್, ಹಗ್ಗಜಗ್ಗಾಟ, ವಾಲಿಬಾಲ್, ವಯಸ್ಕರಿಗೆ ಮಡಕೆ ಒಡೆಯುವ ಸ್ಪರ್ಧೆ, ಪುಟಾಣಿಗಳಿಗೆ ಕಪ್ಪೆ ಜಿಗಿತ ಸೇರಿದಂತೆ ಇನ್ನಿತರ ಕ್ರೀಡೆಗಳು ನಡೆದವು.

ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿಯೇ ಕ್ರೀಡಾಕೂಟ ಆಯೋಜಿಸಿದ್ದು, ಮುಂದಿನ ತಲೆಮಾರಿಗೆ ಪರಿಚಯಿಸುವ ಸಣ್ಣ ಪ್ರಯತ್ನವನ್ನು ಮಾಡಲಾಗಿದೆ ಎಂದು ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ತಿಳಿಸಿದರು.

ಒಟ್ಟಾರೆ ಮಾಂದಲಪಟ್ಟಿಯಿಂದ ಪುಷ್ಪಗಿರಿ ಬೆಟ್ಟಶ್ರೇಣಿಯ ಪಶ್ಚಿಮಘಟ್ಟ ಪ್ರದೇಶದವರೆಗೂ ವಿಸ್ತರಿಸಿರುವ, ಯುವ ಜನಾಂಗದ ಸಂಖ್ಯೆ ಗಣನೀಯವಾಗಿ ಮರೆಯಾಗಿ ಹಿರಿ ಜೀವಗಳೇ ನೆಲೆಸಿರುವ, ಏಲಕ್ಕಿ, ಭತ್ತ, ಒಂದಿಷ್ಟು ಕಾಫಿ ಬೆಳೆದು ಜೀವನ ಕಂಡುಕೊಂಡಿರುವ ಸೂರ್ಲಬ್ಬಿ ನಾಡಿನ ಮಂದಿ ಇಂದು ಜಾನಪದ ಕ್ರೀಡೆಯಲ್ಲಿ ತನ್ಮಯರಾಗಿ ಮೈಮರೆತು ದಿನ ಕಳೆದರು.

- ವಿಜಯ್ ಹಾನಗಲ್