ಮಡಿಕೇರಿ, ಜ.4 : ರಾಜ್ಯದಲ್ಲಿ ನಡೆಯುತ್ತಿರುವ ಹತ್ಯಾ ಪ್ರಕರಣಗಳು ಜಾತಿ ಮತಗಳ ಮೂಲಕ ಮಹತ್ವವನ್ನು ಪಡೆದುಕೊಳ್ಳುತ್ತಿರುವದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ವಿಷಾದಿಸಿರುವ ಜಿ.ಪಂ. ಮಾಜಿ ಉಪಾಧ್ಯಕ್ಷೆÀ ಹೆಚ್.ಎಂ.ಕಾವೇರಿ, ಸಾವಿನ ಮನೆಯ ರಾಜಕಾರಣ ವಿಷಾದನೀಯವೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆಯಾಗುವ ವ್ಯಕ್ತಿ ಯಾವ ಪಕ್ಷ ಮತ್ತು ಜಾತಿಗೆ ಸೇರಿದ್ದಾನೆ ಎಂದು ಗುರುತಿಸುವ ಮೂಲಕ ಮತಬ್ಯಾಂಕ್ ರಾಜಕಾರಣ ಮಾಡಲಾಗುತ್ತಿದ್ದು, ಇದು ಅತ್ಯಂತ ಕೆಟ್ಟ ರಾಜಕಾರಣವೆಂದು ಅಭಿಪ್ರಾಯಪಟ್ಟರು. ವಿಜಯಪುರದ ದಾನಮ್ಮಳ ಅತ್ಯಾಚಾರ ಮತ್ತು ಕೊಲೆ ಹಾಗೂ ಕಾಟಿಪಳ್ಳದ ದೀಪಕ್ ರಾವ್ ಹತ್ಯೆಗಳೆರಡೂ ಅಕ್ಷಮ್ಯ ಅಪರಾಧವೆಂದ ಅವರು, ದಾನಮ್ಮ ಹತ್ಯೆಯನ್ನು ವಿರೋಧಿಸಿ ಜ.6 ರಂದು ಸಮಾನ ಮನಸ್ಕರ ವೇದಿಕೆÀ ನಡೆಸುತ್ತಿರುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡುವದಾಗಿ ತಿಳಿಸಿದರು.

ಜಾತಿ ಧರ್ಮಗಳ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುತ್ತಿರುವ ವಿಚ್ಛಿದ್ರಕಾರಿ ಘಟನೆಗಳ ಬಗ್ಗೆ ಯುವ ಜನತೆ, ಮಾಧ್ಯಮಗಳು ಹಾಗೂ ರಾಜಕಾರಣಿಗಳು ಪ್ರಜ್ಞಾಪೂರ್ವಕವಾಗಿ ಚಿಂತಿಸುವದು ಅಗತ್ಯವೆಂದರು.

ಕೊಡಗಿನಲ್ಲಿ ನಡೆದ ಸಾಕಷ್ಟು ದಲಿತ ದೌರ್ಜನ್ಯ ಪ್ರಕರಣಗಳಿಗೆ ನ್ಯಾಯ ದೊರಕದೆ ಇರುವ ಬಗ್ಗೆ ಮಾತನಾಡಿದ ಅವರು ಯಾವದೇ ಪ್ರಕರಣಗಳು ನಡೆದರೂ ಪ್ರತಿಯೊಂದು ಸಂಘಟನೆಗಳು ಕಾಳಜಿ ವಹಿಸಿ ನ್ಯಾಯ ದೊರಕುವಲ್ಲಿಯವರೆಗೆ ಹೋರಾಟ ನಡೆಸುವ ಅಗತ್ಯವಿದೆ ಎಂದರು.

ಕೋರೆಗಾಂವ್ ಚಳುವಳಿ ವರ್ಷಾಚರಣೆ ಸಂದರ್ಭ ಮಹಾರಾಷ್ಟ್ರದಲ್ಲಿ ಮರಾಠಿ ಮತ್ತು ದಲಿತರ ನಡುವೆ ಬೆಂಕಿ ಹಚ್ಚುವ ಪ್ರಯತ್ನಗಳು ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸುಂಟಿಕೊಪ್ಪ ಗ್ರಾ.ಪಂ. ಸದಸ್ಯ ಹಾಗೂ ಎಸ್‍ಡಿಪಿಐ ಮಹಿಳಾ ಘಟಕದ ಪ್ರಮುಖರಾದ ನಾಗರತ್ನ, ಬಿಎಸ್‍ಪಿ ಪಕ್ಷದ ಫಿಲೋಮಿನಾ ಉಪಸ್ಥಿತರಿದ್ದರು.