ಸೋಮವಾರಪೇಟೆ, ಜ. 4: ರಾಜ್ಯ ಹಣಕಾಸು ಆಯೋಗದ ವತಿಯಿಂದ ರೂ. 1.98 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಪಟ್ಟಣ ಪಂಚಾಯಿತಿಯ ಆಡಳಿತ ಸಮುಚ್ಚಯ ಭವನ ಇನ್ನು 6 ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ರಾಜ್ಯ ಹಣಕಾಸು ಆಯೋಗದ ವಿಶೇಷ ಅನುದಾನದಡಿ 1.98 ಕೋಟಿ ಹಣ ಬಿಡುಗಡೆಯಾಗಿದ್ದು, ಕಚೇರಿ ಸಮುಚ್ಚಯದ ಕೆಳಭಾಗ ವಾಹನಗಳ ಪಾರ್ಕಿಂಗ್ಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.
ಮೊದಲನೇ ಮಹಡಿಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಪ.ಪಂ.ಗೆ ಆಗಮಿಸುವ ಸಾರ್ವಜನಿಕರು ಕುಳಿತುಕೊಳ್ಳಲು ಪ್ರತ್ಯೇಕ ಸ್ಥಳಾವಕಾಶ, ಪ.ಪಂ. ಸದಸ್ಯರುಗಳಿಗೆ ಕೊಠಡಿಯನ್ನು ನಿರ್ಮಿಸಲಾಗುತ್ತಿದ್ದು, ಶೇ. 60 ರಷ್ಟು ಕಾಮಗಾರಿ ಈಗಾಗಲೇ ಮುಕ್ತಾಯಗೊಂಡಿದೆ.
ಆರ್.ಸಿ.ಸಿ. ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಕಿಟಕಿ, ಬಾಗಿಲು, ವಿದ್ಯುತ್ ಸಂಪರ್ಕ ಸೇರಿದಂತೆ ಒಳಾಂಗಣದ ಕೆಲಸ ಬಾಕಿ ಇದೆ. ಎರಡನೇ ಮಹಡಿಯಲ್ಲಿ ವಿಶಾಲವಾದ ಸಭಾಂಗಣ ನಿರ್ಮಾಣಗೊಳ್ಳುತ್ತಿದೆ. ಪಟ್ಟಣ ಪಂಚಾಯಿತಿಯ ಆಡಳಿತ ಮಂಡಳಿ ಸಭೆಗಳು, ಇನ್ನಿತರ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಸಭಾಂಗಣ ಸಿದ್ದಗೊಳ್ಳುತ್ತಿದೆ.
ಇದೇ ಸಮುಚ್ಚಯದಲ್ಲಿ 8 ಮಳಿಗೆಗಳನ್ನು ನಿರ್ಮಿಸಲಾಗುತ್ತಿದ್ದು, ಪ.ಪಂ. ಆಡಳಿತದ ದೃಷ್ಟಿಯಿಂದ ಮಳಿಗೆಗಳನ್ನು ಬಳಸಿಕೊಳ್ಳುವ ಬಗ್ಗೆ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಇರಾದೆ ವ್ಯಕ್ತಪಡಿಸಿದ್ದಾರೆ.
ಇದೀಗ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿರುವ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಕಳೆದ ನಾಲ್ಕು ವರ್ಷಗಳ ಹಿಂದೆ ಅಲ್ಪಸ್ವಲ್ಪ ದುರಸ್ತಿ ಕಾರ್ಯ ಮಾಡಲಾಗಿದೆ. ಎಲ್ಲಾ ವಿಭಾಗಗಳೂ ಒಂದೇ ಸಭಾಂಗಣದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇದ್ದು, ಕಡತಗಳನ್ನು ಕಾಪಾಡಿಕೊಳ್ಳುವದೂ ತ್ರಾಸದಾಯಕವಾಗಿದೆ.
ಸಾರ್ವಜನಿಕರು ಕಚೇರಿಗೆ ಆಗಮಿಸಿದರೆ ಕುಳಿತುಕೊಳ್ಳಲೂ ಸಹ ಸ್ಥಳಾವಕಾಶದ ಕೊರತೆ ಇದೆ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಕೊಠಡಿ, ಇಂಜಿನಿಯರಿಂಗ್ ವಿಭಾಗ, ಮುಖ್ಯಾಧಿಕಾರಿ, ಆರೋಗ್ಯ ಇಲಾಖೆ, ಲೆಕ್ಕ ಶಾಖೆ, ಕಂಪ್ಯೂಟರ್ ಕೊಠಡಿಗಳು ಒಂದೇ ಸಭಾಂಗಣದ ಒಳಗಿದ್ದು, ಕಿಷ್ಕಿಂಧೆಯಂತಾಗಿದೆ.
ಇದರೊಂದಿಗೆ ಸಮರ್ಪಕ ಶೌಚಾಲಯದ ಕೊರತೆಯೂ ಇದ್ದು, ಇದೆಲ್ಲವನ್ನು ನೂತನ ಸಮುಚ್ಚಯ ಭವನ ಹೋಗಲಾಡಿಸಲಿದೆ.
ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಗುತ್ತಿಗೆದಾರ ಶ್ರೀನಿವಾಸ್ ಅವರು ಗುಣಮಟ್ಟಕ್ಕೆ ಆದ್ಯತೆ ನೀಡಿದ್ದು, ನಿರೀಕ್ಷೆಗೂ ಮುಂಚಿತವಾಗಿ ಪ.ಪಂ. ಉಪಯೋಗಕ್ಕೆ ಲಭಿಸುವ ಸಾಧ್ಯತೆಯಿದೆ. ವಾಹನಗಳ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಂಬಂಧ ಸಂಕೀರ್ಣದ ಕೆಳಭಾಗ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.