ಕುಶಾಲನಗರ, ಜ. 3: ಜಿಲ್ಲೆಯ ಪವಿತ್ರ ಕ್ಷೇತ್ರ ತಲಕಾವೇರಿಯ ಬ್ರಹ್ಮಗಿರಿ ತಪ್ಪಲಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಭಂದ ಹೇರುವದರೊಂದಿಗೆ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮಕೈಗೊಳ್ಳ ಬೇಕೆಂದು ಕುಶಾಲನಗರ ಕೊಡವ ಸಮಾಜ ಜಿಲ್ಲಾಡಳಿತವನ್ನು ಆಗ್ರಹಿಸಿದೆ.ಕುಶಾಲನಗರ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಪವಿತ್ರ ಪ್ರದೇಶವಾದ ಬ್ರಹ್ಮಗಿರಿ ಬೆಟ್ಟಕ್ಕೆ ತೆರಳುವ ಪ್ರವಾಸಿಗರು ಅಲ್ಲಿನ ಪಾವಿತ್ರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಭಾಗಮಂಡಲದಲ್ಲಿ ಆಹಾರ ಪದಾರ್ಥಗಳನ್ನು ನದಿಗೆ ವಿಸರ್ಜಿಸಿ ಮಾಲಿನ್ಯ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಭಾಗಮಂಡಲದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಫ್ಲೈಓವರ್ ಯೋಜನೆಯನ್ನು ತಕ್ಷಣ ಕೈಬಿಡಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷರಾದ ಐಯಲಪಂಡ ಮಂದಣ್ಣ, ಕಾರ್ಯದರ್ಶಿ ಪುಲಿಯಂಡ ಚಂಗಪ್ಪ, ಖಜಾಂಚಿ ಗೌಡಂಡ ದೇವಯ್ಯ, ನಿರ್ದೇಶಕ ಚೌರೀರ ತಿಮ್ಮಯ್ಯ, ಹೆಗ್ಗಡೆ ಸಮಾಜದ ಕಾರ್ಯದರ್ಶಿ ಪಾನಿಕುಟ್ಟಿರ ಕಾವೇರಮ್ಮ ಇದ್ದರು.
ಪ್ರತಿಭಟನೆ
ನಾಪೋಕ್ಲು : ಬ್ರಹ್ಮಗಿರಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ಒಂದು ವಾರದೊಳಗೆ ನಿಷೇಧಿಸದಿದ್ದರೆ ಸಾರ್ವಜನಿಕರ ಸಹಕಾರದೊಂದಿಗೆ ಪ್ರವೇಶದ ಗೇಟಿಗೆ ಬೀಗ ಜಡಿದು ಪ್ರತಿಭಟಿಸುವದಾಗಿ ಮಣವಟ್ಟಿರ ದೊರೆ ಸೋಮಣ್ಣ ಜಿಲ್ಲಾಡಳಿತವನ್ನು ಎಚ್ಚರಿಸಿದ್ದಾರೆ.
ಶ್ರೀ ಕ್ಷೇತ್ರದಲ್ಲಿ ಅಷ್ಟಮಂಗಲ ಪ್ರಶ್ನೆ ಇಡಬೇಕು. ತಲಕಾವೇರಿ ಕ್ಷೇತ್ರದ ಪಕ್ಕದಲ್ಲಿ ಪರವಾನಗಿ ಇಲ್ಲದ ಅಂಗಡಿ ಮುಗ್ಗಟ್ಟುಗಳನ್ನು ಕೂಡಲೇ ಜಿಲ್ಲಾಡಳಿತ ತೆರವುಗೊಳಿಸಬೇಕು. ಭಾಗಮಂಡಲದ ತ್ರಿವೇಣಿ ಸಂಗಮದ ಬಳಿಯಲ್ಲಿ ಪ್ರವಾಸಿಗರು ಅಡುಗೆ ಮಾಡಿ ಊಟದ ಎಂಜಲನ್ನು ಕಾವೇರಿ ನದಿಗೆ ಹಾಕದಂತೆ ನಿರ್ಬಂಧ ಹೇರಬೇಕು. ಸಂಗಮದ ಹೊರ ಭಾಗದಲ್ಲಿ ಸಿ.ಸಿ. ಕ್ಯಾಮರವನ್ನು ಅಳವಡಿಸಬೇಕು. ಆಗಮಿಸುವವರ ಚಲನವಲನಗಳನ್ನು ಗಮನಿಸುವ ಕಾರ್ಯವಾಗಬೇಕು. ಕ್ಷೇತ್ರಕ್ಕೆ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಿ ದೇವರ ಪೂಜಾ ವಿಧಿವಿಧಾನಗಳನ್ನು ಸುಗಮವಾಗಿ ನಡೆಸಲು ಕ್ರಮಕೈಗೊಳ್ಳ ಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಬಾದುಮಂಡ ಮುತ್ತಪ್ಪ, ಪಾಡಿಯಮ್ಮಂಡ ಯೋಗಿಶ್ ಮೊಣ್ಣಮ್ಮಯ್ಯ, ಮಣವಟ್ಟಿರ ಪಾಪು ಚಂಗಪ್ಪ, ಮಣವಟ್ಟಿರ ಹರೀಶ್ ಬಿದ್ದಪ್ಪ, ಇದ್ದರು.
ಬೀಗ ಜಡಿಯುವ ಎಚ್ಚರಿಕೆ
ನಾಪೆÇೀಕ್ಲು : ಬ್ರಹ್ಮಗಿರಿ ಬೆಟ್ಟಕ್ಕೆ ಪ್ರವೇಶವನ್ನು ಒಂದು ವಾರದೊಳಗೆ ನಿಷೇಧಿಸದಿದ್ದರೆ. ನಾಡಿನ ಮಹಿಳಾ ಸಂಘಟನೆ ಮತ್ತು ಸಾರ್ವಜನಿಕರ ಸಹಕಾರದಿಂದ ಪ್ರವೇಶ ದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವದು ಎಂದು ನೆಲಜಿ ಅಂಬಲ ಮಹಿಳಾ ಸಮಾಜದ ಅಧ್ಯಕ್ಷೆ ಮಣವಟ್ಟೀರ ಕಮಲ ಬೆಳ್ಯಪ್ಪ ಮತ್ತು ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಾವಿರಾರು ವರ್ಷಗಳ ಹಿಂದೆ ಅಗಸ್ತ್ಯ ಮಹಾ ಮುನಿಗಳು ತಪಸ್ಸು ಮಾಡಿದ ಬ್ರಹ್ಮಗಿರಿ ಬೆಟ್ಟದ ಮೇಲೆ ಋಷಿಗಳು ತಪಸ್ಸು ಮಾಡಿದ ಸ್ಥಳದಲ್ಲಿ ಬಂಡೆಯ ಮೇಲೆ ಚಿಕ್ಕ ಚಿಕ್ಕ ಕುಂಡಿಕೆಗಳಿದ್ದು ಪ್ರವಾಸಿಗಳ ಉಪಳಟದಿಂದ ಇಂದು ಕುಂಡಿಕೆ ಕಾಣದಂತಾಗಿದ್ದು ಇಲ್ಲಿನ ಪರಿಸರ ಕಸ ತ್ಯಾಜಗಳಿಂದ ಕಲುಸಿತ ಗೊಂಡಿದೆ. ಆದುದರಿಂದ ಈ ಪ್ರದೇಶವನ್ನು ಕಾಪಾಡುವ ದೃಷ್ಟಿಯಿಂದ ಜಿಲ್ಲಾಡಳಿತ ಕೂಡಲೆ ಬೆಟ್ಟದ ಪ್ರವೇಶವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಅಷ್ಟಮಂಗಲ ಪ್ರಶ್ನೆ, ಅಂಗಡಿಗಳ ತೆರವು ತಲಕಾವೇರಿಯ ಕುಂಡಿಕೆಗೆ ಹಾಕಿರುವ ಮೇಲ್ಛಾವಣಿಯನ್ನು ಕೂಡಲೇ ತೆಗಿಸಬೇಕು ಎಂದು ಅವರು ಒತ್ತಾಯಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಹಿಳಾ ಸಮಾಜದ ಕಾiರ್Àುದರ್ಶಿ ಅಪ್ಪುಮಣಿಯಂಡ ಡೇಸಿ ಸೋಮಣ್ಣ, ಸದಸ್ಯರಾದ ಮಣವಟ್ಟೀರ ಸುಶೀಲ ಚಂಗಪ್ಪ, ಮುಕ್ಕಾಟೀರ ಶ್ವೇತ ರಾಜಪ್ಪ, ಮಣವಟ್ಟೀರ ಮೀರಾ ಬಿದ್ದಪ್ಪ ಇದ್ದರು.
ಒಕ್ಕೂಟದ ಖಂಡನೆ
ಪವಿತ್ರ ಕಾವೇರಿ ಕ್ಷೇತ್ರದ ಪಾವಿತ್ರತೆ ದಿನೇ ದಿನೇ ಹದಗೆಡುತ್ತಿದ್ದು, ಅಧಃಪತನದತ್ತ ಸಾಗುತ್ತಿದ್ದರೂ, ಜಿಲ್ಲಾಡಳಿತ ಜಾಣಮೌನದಿಂದ ವರ್ತಿಸುತ್ತಿರುವದು ಸರಿಯಲ್ಲ ಎಂದು ಕೊಡವ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಪತ್ರಿಕಾ ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಪವಿತ್ರ ಕ್ಷೇತ್ರ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಭಕ್ತಾದಿಗಳು ಊಟ ಮಾಡಿ, ಅಶುಚಿತ್ವ ಮಾಡುತ್ತಿದ್ದಾರೆ. ಈ ಬಗ್ಗೆ ಕೂಡ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ತೋರುತ್ತಿರುವದು ಖಂಡನಾರ್ಹ ಎಂದಿದ್ದಾರೆ.
ತಲಕಾವೇರಿಯಲ್ಲಿ ಅಷ್ಟಮಂಗಲ ಪ್ರಶ್ನೆ ಏರ್ಪಡಿಸಬೇಕು; ಬ್ರಹ್ಮಗಿರಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಬೇಕು ಹಾಗೂ ತಲಕಾವೇರಿ ತೀರ್ಥ ಕೇಂದ್ರದ ಬಳಿಯ ಅಂಗಡಿ, ಹೊಟೇಲ್ ಮುಂಗಟ್ಟುಗಳನ್ನು ಮುಚ್ಚಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.