ಮಡಿಕೇರಿ, ಜ. 3: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡಿಗೆಯ ಕಾಫಿ ವಕ್ರ್ಸ್‍ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ನೇಪಾಳ ಮೂಲದ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.ಈ ವ್ಯಕ್ತಿ ಕೆಲಸ ನಿರ್ವಹಿಸುತ್ತಿದ್ದ ಸ್ಥಳದಲ್ಲಿ ರಕ್ತದ ಕಲೆಗಳು ಗೋಚರಿಸಿದ್ದು ಇದು ಸಂಶಯಭರಿತ ಗೊಂದಲಕ್ಕೆ ಕಾರಣವಾಗಿದ್ದು, ಸ್ಥಳಕ್ಕೆ ಶ್ವಾನದಳವನ್ನು ಕರೆಸಿ ತಪಾಸಣೆ ನಡೆಸಲಾಗಿದೆ. ಕೂಡಿಗೆಯ ಶ್ರೀವರ ಕಾಫಿ ವಕ್ರ್ಸ್‍ನಲ್ಲಿ ನೇಪಾಳದ ಪ್ರಕಾಶ್ (60) ಎಂಬಾತ ಸೆಕ್ಯೂರಿಟಿ ಕೆಲಸ ನಿರ್ವಹಿಸುತ್ತಿದ್ದು, ತಾ. 2ರ ಸಂಜೆಯಿಂದ ನಾಪತ್ತೆಯಾಗಿದ್ದಾನೆ.
ನಿನ್ನೆ ಬೆಳಿಗ್ಗೆ ಈತ ಸ್ಥಳದಲ್ಲಿ ಇಲ್ಲದಿರುವದು ಅರಿವಾಗಿದೆ. ಪರಿಶೀಲಿಸಿದ ಸಂದರ್ಭ ಗೇಟ್‍ನ ಬಳಿ ರಕ್ತ ಗೋಚರಿಸಿದೆ. ಇಲ್ಲಿಂದ ಆತ ವಾಸಿಸುತ್ತಿದ್ದ ಮನೆಯ ತನಕವೂ ರಕ್ತ ತೊಟ್ಟಿಕ್ಕಿದೆ. ಆದರೆ ಮನೆಯೊಳಗೆ ರಕ್ತದ ಕಲೆ ಕಂಡುಬಂದಿಲ್ಲ. ರಕ್ತ ಕಾಣಿಸಿದ್ದ ರಿಂದ ಶ್ವಾನದಳ ಪರಿಶೀಲನೆ ನಡೆಸಿದೆ. ರಕ್ತವನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಿ ಅಲ್ಲಿಂದ ಇದು ಮನುಷ್ಯನ ರಕ್ತವೋ ಯಾವದಾದರೂ ಪ್ರಾಣಿಯ ರಕ್ತವೋ ಎಂಬದನ್ನು ಖಚಿತಪಡಿಸಿ ಕೊಳ್ಳಬೇಕಿದೆ.
ಪೊಲೀಸ್ ಮೂಲಗಳ ಪ್ರಕಾರ ಈ ವ್ಯಕ್ತಿ ಮಾಲೀಕರಿಗೆ ಸುಮಾರು ಒಂದೂವರೆ ಲಕ್ಷದಷ್ಟು ಹಣವನ್ನು ನೀಡಬೇಕಿತ್ತಂತೆ. ವಾರದಿಂದೆ ಈತ ತನ್ನ ಪತ್ನಿಯನ್ನು ನೇಪಾಳಕ್ಕೆ ಕಳುಹಿಸಿದ್ದಾನೆ. ಈತನ ಓರ್ವ ಪುತ್ರ ಕುಶಾಲನಗರದ ಕಾಳೇಘಾಟ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಡಿಸೆಂಬರ್ 30 ರಿಂದ ಈತನೂ ಕೆಲಸಕ್ಕೆ ಹೋಗಿಲ್ಲ. ಮಾತ್ರವಲ್ಲದೆ ಮೊಬೈಲ್ ಕೂಡ ಸ್ವಿಚ್‍ಆಫ್ ಆಗಿದೆ.
ನಿನ್ನೆಯಿಂದ ನಾಪತ್ತೆಯಾಗಿರುವ ಪ್ರಕಾಶನ ಮೊಬೈಲ್ ಕೂಡ ಸ್ವಿಚ್‍ಆಫ್ ಆಗಿದ್ದು, ಇವರು ವ್ಯವಸ್ಥಿತ ಸಿದ್ಧತೆಯೊಂದಿಗೆ ಜಾಗ ಖಾಲಿ ಮಾಡಿದ್ದಾರೆಯೇ ಅಥವಾ ಇನ್ನೇನು ನಡೆದಿದೆ ಎಂಬದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಕುಶಾಲನಗರ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.