ಮಡಿಕೇರಿ, ಜ. 3: ಕಳೆದ 12 ದಿನಗಳ ಹಿಂದೆ ಡಿ. 23 ರಂದು ಬೆಳಗಿನ ಜಾವ ಐದು ಗಂಟೆಯ ಸುಮಾರಿಗೆ ಮನೆಯ ಅಂಗಳದಲ್ಲೇ ಜೀಪು ಚಾಲಕನೊಬ್ಬನ ಮೇಲೆ ಗುಂಡು ಹಾರಿಸಿ ಕೊಲೆಗೈದಿದ್ದ ಪ್ರಕರಣವು ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಮೃತ ಕಾಳಚಂಡ ರಂಜನ್ ಪೂವಯ್ಯ (47) ಅವರ ಪತ್ನಿಯೇ ಗಂಡನ ಕೊಲೆಗೆ ಸುಪಾರಿ ನೀಡಿರುವದು ಪೊಲೀಸ್ ತನಿಖೆ ವೇಳೆ ಬಹಿರಂಗಗೊಂಡಿದೆ.

ಆ ಮೇರೆಗೆ ಮೃತ ರಂಜನ್ ಪೂವಯ್ಯ ಅವರ ಪತ್ನಿ ಶಾಂತಿ (36) ಹಾಗೂ ಚೆಂಬೆಬೆಳ್ಳೂರು ಗ್ರಾಮದ ಮಂಡೇಪಂಡ ಎಂ. ರಾಜೇಶ್ ಅಯ್ಯಪ್ಪ (40) ಹಾಗೂ ಮಂಡೇಪಂಡ ಎಂ. ಅಶೋಕ್ ದೇವಯ್ಯ (44) ಎಂಬವರನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. ಅಲ್ಲದೆ ದುಷ್ಕøತ್ಯದ ಕುರಿತು

(ಮೊದಲ ಪುಟದಿಂದ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಇಂದು ಸುದ್ದಿಗೋಷ್ಠಿಯಲ್ಲಿ ಘಟನೆಯನ್ನು ವಿವರಿಸಿದರು.

ದುಷ್ಕøತ್ಯ ವಿವರ: ತಾ. 23.12.2017 ರಂದು ಮಾದಾಪುರ ಸಮೀಪದ ಇಗ್ಗೋಡ್ಲು ಗ್ರಾಮದ ಕಾಳಚಂಡ ರಂಜನ್ ಪೂವಯ್ಯ ಅವರನ್ನು ಗುಂಡು ಹೊಡೆದು ಹತ್ಯೆ ಮಾಡಲಾಗಿದ್ದು, ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣಾ ಮೊ.ಸಂ. 364/17 ಕಲಂ 302 ಐಪಿಸಿ 3 ಮತ್ತು 25 ಶಸ್ತ್ರಾಸ್ತ್ರ ಕಾಯ್ದೆ ರೀತ್ಯ ಪ್ರಕರಣ ದಾಖಲಾಗಿ, ಸೋಮವಾರಪೇಟೆ ವೃತ್ತ ನಿರೀಕ್ಷಕರು ತನಿಖೆ ಕೈಗೊಂಡಿದ್ದರು.

ಈ ಪ್ರಕರಣವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಸೋಮವಾರಪೇಟೆ ವೃತ್ತ ನಿರೀಕ್ಷಕರು ಹಾಗೂ ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸ್ ನಿರೀಕ್ಷಕರು ಇವರಿಗೆ ಮಾರ್ಗ ದರ್ಶನ ನೀಡಿದರು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಡಿಸಿಐಬಿ ಪೊಲೀಸ್ ನಿರೀಕ್ಷಕರು ಮತ್ತು ತಂಡ ಮಾಹಿತಿ ಸಂಗ್ರಹಿಸಿ, ವೀರಾಜಪೇಟೆ ತಾಲೂಕು ಚಂಬೆಬೆಳ್ಳೂರು ಗ್ರಾಮದ ಮಂಡೇಪಂಡ ರಾಜೇಶ್ ಅಯ್ಯಪ್ಪನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆತನು ಮೃತ ಕಾಳಚಂಡ ರಂಜನ್ ಪೂವಯ್ಯ ಅವರ ಪತ್ನಿ ಶಾಂತಿಯನ್ನು ಫೇಸ್‍ಬುಕ್ ಮುಖಾಂತರ ಪರಿಚಯ ಮಾಡಿಕೊಂಡು, ಪರಿಚಯ ಪ್ರೀತಿಗೆ ತಿರುಗಿತ್ತು.

ಈ ನಡುವೆ ಶಾಂತಿಯ ಗಂಡ ಪ್ರತಿ ದಿನ ಕುಡಿದು ಬಂದು ತನಗೆ ಹಾಗೂ ತನ್ನ ಮಕ್ಕಳಿಗೆ ಹಿಂಸಿಸುತ್ತಿದ್ದು, ಆತನನ್ನು ಹೊರಗಿ ನವರಿಂದ ಕೊಲೆ ಮಾಡಿಸುವಂತೆ ರಾಜೇಶನನ್ನು ಕೇಳಿಕೊಂಡಿದ್ದಳು. ಅದರಂತೆ ರಾಜೇಶನು ಕಾಳಚಂಡ ರಂಜು ಪೂವಯ್ಯ ಅವರನ್ನು ಕೊಲೆ ಮಾಡಿಸಲು ಹಣ ಖರ್ಚಾ ಗುವದಾಗಿ ತಿಳಿಸಿದ ಮೇರೆಗೆ ಆ ಹಣವನ್ನು ಕೊಲೆ ಮಾಡಿದ ನಂತರ ನೀಡುವದಾಗಿ ಶಾಂತಿ ಹೇಳಿ ದ್ದಳೆಂದು ತನಿಖೆಯಿಂದ ಗೊತ್ತಾಗಿದೆ.

ಶಾಂತಿ ಹಾಗೂ ಮಂಡೇಪಂಡ ರಾಜೇಶ ಅಯ್ಯಪ್ಪ ಸೇರಿ ಸಂಚು ರೂಪಿಸಿದ್ದು, ಕಾಳಚಂಡ ರಂಜನ್ ಪೂವಯ್ಯ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಮನೆಯಿಂದ ಹೊರಡುವ ದರಿಂದ ದುಷ್ಕøತ್ಯಕ್ಕೆ ಅದೇ ಸರಿಯಾದ ಸಮಯವೆಂದು ನಿರ್ಧರಿಸಿದ್ದಾರೆ. ಈ ಕೆಲಸಕ್ಕಾಗಿ ರಾಜೇಶ ತನ್ನ ಕುಟುಂಬದವನೇ ಆದ ಮಂಡೇಪಂಡ ಅಶೋಕ ದೇವಯ್ಯನಿಗೆ ಈ ಕೊಲೆ ಮಾಡಿಕೊಟ್ಟಲ್ಲಿ ಆತನಿಗೆ ರೂ. 1.50 ಲಕ್ಷ ಹಣವನ್ನು ನೀಡುವದಾಗಿ ಹೇಳಿದ್ದಾನೆ.

ಡಿ. 23 ರಂದು ಬೆಳಗ್ಗಿನ ಜಾವ ಮಂಡೇಪಂಡ ರಾಜೇಶ ಹಾಗೂ ಅಶೋಕ ವೀರಾಜಪೇಟೆಯಿಂದ ಸ್ನೇಹಿತನ ಬೈಕ್‍ನಲ್ಲಿ ಹೊರಟು ಇಗ್ಗೋಡ್ಲು ಗ್ರಾಮಕ್ಕೆ ತಲುಪಿದ್ದಾರೆ. ಅಲ್ಲಿ ಕಾಳಚಂಡ ರಂಜನ್ ಪೂವಯ್ಯ ತನ್ನ ಬಾಡಿಗೆ ಮನೆಯಿಂದ ಕೆಳಗೆ ಇಳಿದು ಬರುವ ವೇಳೆ ಅಶೋಕನು ತನ್ನ ಬಂದೂಕಿನಿಂದ ಗುಂಡು ಹೊಡೆದು ಕೊಲೆ ಮಾಡಿರುವದಾಗಿ ತಪ್ಪೊಪ್ಪಿ ಕೊಂಡಿರುತ್ತಾನೆ. ಈ ಪ್ರಕರಣದಲ್ಲಿ ಉಳಿದ ಆರೋಪಿಗಳಾದ ಮಂಡೇಪಂಡ ಅಶೋಕ್ ದೇವಯ್ಯ ಹಾಗೂ ಮೃತ ಕಾಳಚಂಡ ರಂಜನ್ ಪೂವಯ್ಯನ ಪತ್ನಿ ಶಾಂತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಈ ಸಂದರ್ಭ ಆರೋಪಿಗಳು ತಾವು ರಂಜನ್ ಪೂವಯ್ಯನ ಕೊಲೆ ಪ್ರಕರಣದಲ್ಲಿ ಸಂಚುರೂಪಿಸಿ ಭಾಗಿಯಾಗಿರುವ ಬಗ್ಗೆ ತಪ್ಪೊಪ್ಪಿ ಕೊಂಡಿರುತ್ತಾರೆ ಎಂದು ಎಸ್ಪಿ ವಿವರಿಸಿದ್ದಾರೆ.

ಆರೋಪಿಗಳ ವಿವರ: ದುಷ್ಕøತ್ಯದ ಮೊದಲಿಗೆ ಆರೋಪಿ ಕಾಳಚಂಡ ಶಾಂತಿ ಪೂವಯ್ಯ (36) ಗೃಹಿಣಿಯಾಗಿದ್ದು, ಇಗ್ಗೋಡ್ಲು ಗ್ರಾಮ, ಮಾದಾಪುರದಲ್ಲಿ ವಾಸಿಸುವದ ರೊಂದಿಗೆ ಎರಡು ಮಕ್ಕಳ ತಾಯಿ.

ಎರಡನೇ ಆರೋಪಿ ಮಂಡೇಪಂಡ ರಾಜೇಶ ಅಯ್ಯಪ್ಪ. 9ನೇ ತರಗತಿಯವರೆಗೆ ವೀರಾಜಪೇಟೆಯಲ್ಲಿ ವ್ಯಾಸಂಗ ಮಾಡಿದ್ದು, ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ಕೊಲೆ ಪ್ರಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದು, ಒಂದು ಪ್ರಕರಣದಲ್ಲಿ ನ್ಯಾಯಾಲಯವು 2012ರಲ್ಲಿ 7 ವರ್ಷ ಶಿಕ್ಷೆ ಪ್ರಕಟಿಸಿರುತ್ತದೆ.

ಮೂರನೇ ಆರೋಪಿ ಮಂಡೇಪಂಡ ಅಶೋಕ ದೇವಯ್ಯ 8ನೇ ತರಗತಿಯವರೆಗೆ ದೇವಣಗೇರಿ ಯಲ್ಲಿ ವ್ಯಾಸಂಗ ಮಾಡಿದ್ದು, ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2010ರಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಕೊಲೆ ಬೆದರಿಕೆ ಪ್ರಕರಣದಲ್ಲಿ ಆರೋಪಿ ಯಾಗಿರುವದಾಗಿದೆ.

ಆರೋಪಿಗಳಿಂದ ಸಂಚು ರೂಪಿಸಲು ಉಪಯೋಗಿಸಿದ್ದ ಮೊಬೈಲ್‍ಗಳು, ಕೃತ್ಯಕ್ಕೆ ಉಪಯೋಗಿಸಿದ ದ್ವಿಚಕ್ರ ವಾಹನ ಹಾಗೂ ಒಂದು ಎಸ್‍ಬಿಬಿಎಲ್ ಕೋವಿಯನ್ನು ವಶಪಡಿಸಿ ಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಮಾರ್ಗ ದರ್ಶನದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಎಂ. ಮಹೇಶ್ ನೇತೃತ್ವದಲ್ಲಿ ಡಿಸಿಐಬಿ ಎಎಸ್‍ಐಗಳಾದ ಕೆ.ವೈ. ಹಮೀದ್, ಎನ್.ಟಿ. ತಮ್ಮಯ್ಯ, ಸಿಬ್ಬಂದಿಗಳಾದ ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಎಸ್. ಅನಿಲ್, ವಿ.ಜಿ. ವೆಂಕಟೇಶ್, ಕೆ.ಆರ್. ವಸಂತ, ಎಂ.ಬಿ. ಸುಮತಿ, ಯು.ಎ. ಮಹೇಶ್, ಸಿ.ಕೆ. ರಾಜೇಶ್, ಎಂ.ಎ. ಗಿರೀಶ್ ಹಾಗೂ ಚಾಲಕರುಗಳಾದ ಕೆ.ಎಸ್. ಶಶಿಕುಮಾರ್, ಶೇಷಪ್ಪ ಪಾಲ್ಗೊಂಡಿದ್ದರು. ಇವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ನಗದು ಬಹುಮಾನ ಘೋಷಿಸಿದ್ದಾರೆ.