ಕುಶಾಲನಗರ, ಜ. 3: ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡು ನೂತನ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ 3ನೇ ದಿನಕ್ಕೆ ಕಾಲಿಟ್ಟಿದೆ. ತಾ. 1 ರಂದು ಸತ್ಯಾಗ್ರಹ ಆರಂಭಿಸಿದ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮತ್ತಿತರರು ಪಟ್ಟಣದ ಕಾರು ನಿಲ್ದಾಣದ ಗುಂಡೂರಾವ್ ವೇದಿಕೆಯಲ್ಲಿ ಅಹೋರಾತ್ರಿ ಉಪವಾಸ ಮುಂದುವರೆಸಿದ್ದಾರೆ. sಸ್ಥಳೀಯ ಮಹಿಳಾ ಭಜನಾ ಮಂಡಳಿಯ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡು ತಾಲೂಕು ರಚನೆಗಾಗಿ ಒತ್ತಾಯಿಸಿದರು. ಮಧ್ಯಾಹ್ನ ಪ್ರತಿಭಟನಾ ನಿರತ ಕಾರ್ಯಕರ್ತರು ಮುಖ್ಯರಸ್ತೆಯಲ್ಲಿ ಕೆಲಕಾಲ ಮಾನವ ಸರಪಳಿ ರಚಿಸಿದರು.
ಮಾಹಿತಿ ಪಡೆದ ಜಿಲ್ಲಾಧಿಕಾರಿ
ಕಾವೇರಿ ತಾಲೂಕು ರಚನೆಗೆ ಒತ್ತಾಯಿಸಿ ಕುಶಾಲನಗರದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಹಿನ್ನಲೆಯಲ್ಲಿ ಮಂಗಳವಾರ ತಡರಾತ್ರಿಯಲ್ಲಿ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು.
ರಾತ್ರಿ 11 ಗಂಟೆ ವೇಳೆಗೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಪ್ರತಿಭಟನಾಕಾರರೊಂದಿಗೆ ಮಾಹಿತಿ ಸಂಗ್ರಹಿಸುವದರೊಂದಿಗೆ ಮನವಿ ಸ್ವೀಕರಿಸಿ ಪ್ರತಿಭಟನೆಯನ್ನು ಕೈಬಿಡಲು ಸಲಹೆ ನೀಡಿದರು. ಆದರೆ ಜಿಲ್ಲಾಧಿಕಾರಿಗಳ ಮನವಿಗೆ ಸ್ಪಂದಿಸದ ಪ್ರತಿಭಟನಾಕಾರರು ಉಪವಾಸ ಸತ್ಯಾಗ್ರಹ ಮುಂದುವರೆಸಿದ್ದಾರೆ. ಉಪವಿಭಾಗಾಧಿಕಾರಿ ನಂಜುಂಡೇಗೌಡ, ತಾಲೂಕು ತಹಶೀಲ್ದಾರ್ ಮಹೇಶ್, ಉಪ ತಹಶೀಲ್ದಾರ್ ನಂದಕುಮಾರ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಪಿ.ಚಂದ್ರಕಲಾ, ಹೋರಾಟ ಸಮಿತಿ ಪ್ರಮುಖರಾದ ಆರ್.ಕೆ. ನಾಗೇಂದ್ರ, ಅಬ್ದುಲ್ ಖಾದರ್ ಈ ಸಂದರ್ಭ ಜಿಲ್ಲಾಧಿಕಾರಿಗಳೊಂದಿಗೆ ಇದ್ದರು.
(ಮೊದಲ ಪುಟದಿಂದ) ಈ ನಡುವೆ ಸರಕಾರಿ ಆಸ್ಪತ್ರೆಯ ವೈದ್ಯರು ಸ್ಥಳಕ್ಕೆ ಬಂದು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಸದಸ್ಯರ ಆರೋಗ್ಯ ತಪಾಸಣೆ ನಡೆಸಿದರು.
ಕೂಡಿಗೆ: ಶಿರಂಗಾಲ ಗ್ರಾಮ ಪಂಚಾಯಿತಿ ಎದುರು ಶಿರಂಗಾಲ ಕಾವೇರಿ ತಾಲೂಕು ಸ್ಥಾನೀಯ ಸಮಿತಿಯ ವತಿಯಿಂದ ಪ್ರತಿಭಟನೆ ನೆಡೆಯಿತು. ಈ ಸಂದರ್ಭ ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ರಮೇಶ ಸೇರಿದಂತೆ ಸಮಿತಿಯ ಸದಸ್ಯರುಗಳು, ಗ್ರಾಮಸ್ಥರು, ದೇವಾಲಯ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ನಿರ್ದೇಶಕರು ಹಾಜರಿದ್ದರು.
ಚೆಟ್ಟಳ್ಳಿಯಲ್ಲಿ ಉಪವಾಸ
ಕಾವೇರಿ ತಾಲೂಕಿನ ಹೋರಾಟಕ್ಕೆ ಚೆಟ್ಟಳ್ಳಿಯ ಗ್ರಾಮಸ್ಥರು ಇಂದು ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ತಮ್ಮ ಬೆಂಬಲ ಸೂಚಿಸಿದರು. ಸತ್ಯಾಗ್ರಹದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನೀತಾ ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಪುತ್ತರಿರ ಪಪ್ಪು ತಿಮ್ಮಯ್ಯ , ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವತ್ಸಲಾ , ಹೋರಾಟ ಸಮಿತಿಯ ವಲಯ ಅಧ್ಯಕ್ಷ ಸನ್ನಿ ಅಯ್ಯಪ್ಪ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತೀರ್ಥ ಕುಮಾರ್, ಮಧುಸೂದನ್, ಕಾಂಗ್ರೆಸ್ಸಿನ ಸ್ಥಾನೀಯ ಕಾರ್ಯದರ್ಶಿ ಝುಬೇರ್, ಡಿವೈಎಫ್ಐ ಸದಸ್ಯ ಮಹೇಶ್ ಕಾನನಕಾಡು, ನೌಶಾದ್ ಪೊನ್ನತ್ಮೊಟ್ಟೆ, ಶಶಿ ಮಂಜುನಾಥ್, ಪಿ.ಕೆ. ಶಶಿ ಕುಮಾರ್, ವರ್ತಕ ಸುರೇಶ ಬಾಬು, ಇರ್ಫಾನ್, ಸುರೇಂದ್ರ, ಲತೀಫ್, ವಕೀಲ ನವೀನ್ ಬಿದ್ದಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ವಿನು, ಇಸ್ಮಾಯಿಲ್ ಕೆ.ಎಂ. ಜೆಡಿಎಸ್ನ ಸಿ.ಲ್. ವಿಶ್ವ, ಶಿವದಾಸ್ ಮತ್ತಿತರರು ಹಾಜರಿದ್ದರು.
ಮನವೊಲಿಕೆ ಯತ್ನ : ಸಂಜೆ ವೇಳೆ ಕುಶಾಲನಗರಕ್ಕೆ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಭೇಟಿ ನೀಡಿ ಕಾವೇರಿ ತಾಲೂಕು ಹೋರಾಟಗಾರರ ಮನವೊಲಿಸುವ ಪ್ರಯತ್ನ ಮಾಡಿದರು.
ಸುಂಟಿಕೊಪ್ಪ : ಕೊಡಗರಹಳ್ಳಿ ಕಾವೇರಿ ತಾಲೂಕು ಹೋರಾಟ ಸ್ಥಾನೀಯ ಸಮಿತಿ ಮತ್ತು ಕೇಂದ್ರೀಯ ಸಮಿತಿ ವತಿಯಿಂದ ಕೊಡಗರಹಳ್ಳಿ ಗ್ರಾಮಸ್ಥರು ಕುಶಾಲನಗರವನ್ನು ಕೇಂದ್ರವಾಗಿರಿಸಿಕೊಂಡು ಕಾವೇರಿ ತಾಲೂಕು ರಚಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಬುಧವಾರ ಪ್ರತಿಭಟನೆಯನ್ನು ನಡೆಸಿದರು.
ರಾಷ್ಟ್ರೀಯ ಹೆದ್ದಾರಿಯ ಕೊಡಗರಹಳ್ಳಿ ವೃತ್ತದ ಬಳಿಯಲ್ಲಿ ಜಮಾವಣೆಗೊಂಡ ಪ್ರತಿಭಟನಾ ಕಾರರು ಕಾವೇರಿ ತಾಲೂಕು ನಮ್ಮೆಲ್ಲರ ಹಕ್ಕು ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಸುಂಟಿಕೊಪ್ಪ ವಿಎಸ್ಎಸ್ಎನ್ ಬ್ಯಾಂಕಿನ ಅಧ್ಯಕ್ಷ ಹಾಗೂ ಕಾವೇರಿ ತಾಲೂಕು ಹೋರಾಟ ಸಮಿತಿಯ ಕೇಂದ್ರೀಯ ಸದಸ್ಯ ಎನ್.ಸಿ. ಕ್ಲೈವಾ ಪೊನ್ನಪ್ಪ, ಕೊಡಗರಹಳ್ಳಿ ಗ್ರಾ.ಪಂ. ಅಧ್ಯಕ್ಷ ಅಬ್ಬಾಸ್ ಮಾತನಾಡಿದರು.
7ನೇ ಹೊಸಕೋಟೆ ಗ್ರಾ.ಪಂ. ಉಪಾಧ್ಯಕ್ಷ ಕುಂಞಕುಟ್ಟಿ, ಸದಸ್ಯ ರಮೇಶ್, ಕೊಡಗರಹಳ್ಳಿ ಗ್ರಾ.ಪಂ. ಸದಸ್ಯರಾದ ಸಲೀಂ, ಉಸ್ಮಾನ್, ಕೆ.ಪಿ. ಭಾಗೇಶ್, ಎಂ.ಎನ್. ನಾಣಯ್ಯ, ಅಬ್ದುಲ್ ರಜಾಕ್, ಹಂಸ, ದತ್ತ ಸೋಮಣ್ಣ, ಉಮೇಶ್ ಇತರರು ಇದ್ದರು.