ಮಡಿಕೇರಿ, ಜ. 3: ಅಮ್ಮತ್ತಿ ಕಾರ್ಮಾಡುವಿನಲ್ಲಿ ಮನೆಯೊಂದಕ್ಕೆ ನುಗ್ಗಿರುವ ಕಳ್ಳರು ಚಿನ್ನಾಭರಣ ಅಪಹರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ನಡುವೆ ಕಳುವಾ ಗಿರುವ ಮನೆಯ ಸನಿಹದ ಮತ್ತೊಂದು ಮನೆಯಲ್ಲಿ ನಿಲ್ಲಿಸಿದ್ದ ಬೈಕೊಂದು ಡಿಸೆಂಬರ್ 30ರ ರಾತ್ರಿ ಕಳ್ಳತನವಾ ಗಿದ್ದು ಈ ಎರಡು ಕೃತ್ಯಗಳನ್ನು ಒಟ್ಟಿಗೆ ನಡೆಸಿರುವ ಶಂಕೆ ವ್ಯಕ್ತಗೊಂಡಿದೆ.
ಅಲ್ಲಿನ ಕೃಷ್ಣ ಎಂಬವರ ಮನೆ ಕಳ್ಳತನವಾಗಿದ್ದರೆ ಬಿ.ಬಿ. ಸಂಜಯ್ ಎಂಬವರ ಬೈಕ್ ಅಪಹರಣವಾಗಿದೆ.
ಕೃಷ್ಣ ಅವರು ಮೈಸೂರಿನಲ್ಲಿ ಹೆಚ್.ಡಿ.ಎಫ್.ಸಿ. ಬ್ಯಾಂಕ್‍ನ ಉದ್ಯೋಗಿಯಾಗಿದ್ದು, ಪತ್ನಿ, ಮಕ್ಕಳು ಅಮ್ಮತ್ತಿ ಕಾರ್ಮಾಡು ಮನೆಯಲ್ಲಿದ್ದರು. ಡಿಸೆಂಬರ್ 25 ರಿಂದ ಮಕ್ಕಳಿಗೆ ರಜೆ ಇದ್ದ ಕಾರಣ ಇವರು ಮೈಸೂರಿಗೆ ತೆರಳಿದ್ದು, ಜನವರಿ 2 ರಂದು ಮನೆಗೆ ಹಿಂತಿರುಗಿದಾಗ ಮನೆ ನುಗ್ಗಿ ಕಳ್ಳತನವಾಗಿರುವದು ತಿಳಿದು ಬಂದಿದೆ. ಮನೆಯ ಹಿಂಬಾಗಿಲನ್ನು ಕೊಡಲಿಯಿಂದ ಒಡೆದಿರುವ ಕಳ್ಳರು ಬೀರುವಿನಲ್ಲಿದ್ದ ರೂ. 87 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ಅಪಹರಿಸಿದ್ದಾರೆ. ಈ ಬಗ್ಗೆ ಮನೆಯವರು ನೀಡಿರುವ ದೂರಿನಂತೆ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಅವರು ಪ್ರಕರಣ ದಾಖಲಿಸಿ ಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಡಿಸೆಂಬರ್ 30 ರಂದು ರಾತ್ರಿ ಈ ಮನೆಯಿಂದ ಸುಮಾರು ಮುನ್ನೂರು ಮೀಟರ್ ದೂರದಲ್ಲಿರುವ ಬಿ.ಬಿ. ಸಂಜಯ್ ಅವರ ಮನೆಯಲ್ಲಿ ನಿಲ್ಲಿಸಿದ್ದ ಬಜಾಜ್ ಸಿಟಿ 100 (ಕೆಎ 12 ಹೆಚ್ 5581) ಬೈಕ್ ಮರುದಿನ ಬೆಳಿಗ್ಗೆ ನಾಪತ್ತೆಯಾಗಿದ್ದು, ಈ ಬಗ್ಗೆ ಡಿಸೆಂಬರ್ 31 ರಂದು ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣಾಧಿಕಾರಿ ಸುರೇಶ್ ಬೋಪಣ್ಣ ಈ ಪ್ರಕರಣದ ತನಿಖೆ ನಡೆಸುತ್ತಿದ್ದರು.
ಇದೀಗ ಮನೆ ನುಗ್ಗಿ ಕಳವು ಪ್ರಕರಣವೂ ಬೆಳಕಿಗೆ ಬಂದಿದ್ದು, ಎರಡು ಘಟನೆಗಳೂ ಒಂದೇ ದಿನ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.