ಸೋಮವಾರಪೇಟೆ, ಜ. 2: ಅಮೇರಿಕಾದಲ್ಲಿ ಖ್ಯಾತ ಕಿಡ್ನಿ ರೋಗ ತಪಾಸಣೆ-ಚಿಕಿತ್ಸಾ ತಜ್ಞರಾಗಿರುವ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಪುತ್ರ, ಡಾ. ಎಂ.ಎ. ಕಾರ್ಯಪ್ಪ ಅವರು ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕಿಡ್ನಿ ಸಂಬಂಧಿತ ರೋಗಿಗಳ ಆರೋಗ್ಯವನ್ನು ತಪಾಸಣೆ ನಡೆಸಿದರು.

ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸೀಸ್‍ಗೆ ಒಳಗಾಗುತ್ತಿರುವವರೂ ಸೇರಿದಂತೆ ಕಿಡ್ನಿ ಸಂಬಂಧಿತ ತೊಂದರೆಗಳಿಂದ ಬಳಲುತ್ತಿರುವ ರೋಗಿಗಳು ಶಿಬಿರಕ್ಕೆ ಆಗಮಿಸಿ ವೈದ್ಯರಿಂದ ತಪಾಸಣೆಗೆ ಒಳಗಾದರು.

ಈ ಹಿಂದೆ ಪಡೆಯುತ್ತಿದ್ದ ಚಿಕಿತ್ಸೆ, ಔಷಧಿಯ ವಿವರಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಡಾ. ಕಾರ್ಯಪ್ಪ ಹೆಚ್ಚಿನ ಚಿಕಿತ್ಸೆ, ಔಷಧಿ ಬದಲಾವಣೆಯ ಬಗ್ಗೆ ಸಲಹೆ ನೀಡಿದರು. ಎಲ್ಲಾ ರೋಗಿಗಳನ್ನು ಅತ್ಯಂತ ಸೌಮ್ಯವಾಗಿ ಪರಿಶೀಲಿಸಿದ ಅವರು, ಸ್ಥಳೀಯವಾಗಿ ದೊರೆಯುವ ಔಷಧಿಗಳ ಮಾಹಿತಿ ಪಡೆದು ಲಭ್ಯತೆಗೆ ಅನುಗುಣವಾಗಿ ಶಿಫಾರಸ್ಸು ಮಾಡಿದರು.

ಶಿಬಿರಕ್ಕೆ ಚಾಲನೆ ನೀಡಿದ ಶಾಸಕ ರಂಜನ್ ಮಾತನಾಡಿ, ತಮ್ಮ ಪುತ್ರ 10 ದಿನಗಳ ರಜೆಯ ಮೇಲೆ ಆಗಮಿಸಿದ್ದು, ಕಳೆದ ಬಾರಿ ಮಡಿಕೇರಿ ಯಲ್ಲಿ ಕಿಡ್ನಿ ಸಂಬಂಧಿತ ರೋಗಿಗಳನ್ನು ತಪಾಸಣೆ ನಡೆಸಿದ್ದರು. ಈ ಬಾರಿ ಸೋಮವಾರಪೇಟೆ ಮತ್ತು ಮಡಿಕೇರಿಗಳಲ್ಲಿ ಶಿಬಿರ ಆಯೋಜಿಸಿದ್ದು ರೋಗಿಗಳು ಸದುಪಯೋಗಪಡಿಸಿ ಕೊಳ್ಳಬೇಕು ಎಂದರು.

ಒಟ್ಟು 36 ಮಂದಿ ರೋಗಿಗಳನ್ನು ಡಾ. ಕಾರ್ಯಪ್ಪ ಅವರು ತಪಾಸಣೆ ನಡೆಸಿದರು. ಹುಟ್ಟಿನಿಂದಲೇ ಕಿಡ್ನಿ ಸಂಬಂಧಿತ ರೋಗಕ್ಕೆ ತುತ್ತಾಗಿರುವ 12 ವರ್ಷ ಪ್ರಾಯದ ಹುಡುಗನ ಕಿಡ್ನಿಯನ್ನು ಬದಲಾಯಿಸುವದೇ ಸೂಕ್ತವೆಂದು ಡಾ. ಕಾರ್ಯಪ್ಪ ಶಿಫಾರಸ್ಸು ಮಾಡಿದರು. ಕಿಡ್ನಿ ಸ್ಟೋನ್‍ಗೆ ಸಂಬಂಧಿಸಿದ ರೋಗಿಗಳೇ ಅಧಿಕವಾಗಿ ತಪಾಸಣೆಗೆ ಒಳಗಾಗಿ ದ್ದಾರೆ. ಎಲ್ಲರಿಗೂ ಸೂಕ್ತ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.

ತಾ. 3 ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನದವರೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಕಿಡ್ನಿ ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುವದು. ಆಸಕ್ತರು ಶಿಬಿರದ ಪ್ರಯೋಜನ ಪಡೆದು ಕೊಳ್ಳಬಹುದು ಎಂದು ಹೇಳಿದರು.