ವೀರಾಜಪೇಟೆ, ಜ. 2: ಇತ್ತಿಚೇಗೆ ಕುರ್ಚಿಗ್ರಾಮದ ಅಜ್ಜಮಾಡ ಪೊನ್ನಮ್ಮ ಅವರ ಭತ್ತದ ಗದ್ದೆಗೆ ಕಾಡಾನೆಗಳು ಧಾಳಿ ಮಾಡಿದ್ದು ಬೆಳೆದು ಬಂದ ತೆನೆಗಳು ನೆಲಕ್ಕಚ್ಚಿ ಸಾವಿರಾರು ರೂಪಾಯಿಗಳ ನಷ್ಟ ಉಂಟಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಅವರು ಫಸಲು ನಷ್ಟವಾದ ಗದ್ದೆಯನ್ನು ವೀಕ್ಷಣೆ ಮಾಡಿ ಗದ್ದೆಯ ಮಾಲೀಕರಾದ ಪೊನ್ನಮ್ಮ ಅವರಿಗೆ ಅರಣ್ಯ ಇಲಾಖೆಯಿಂದ ಬೆಳೆ ಪರಿಹಾರರ್ಥವಾಗಿ 42000 ರೂ. ಗಳನ್ನು ನೀಡುವಂತೆ ಅಧಿಕಾರಿಗಳಿಗೆ ಆದೇಶ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಪದ್ಮಿನಿ ಪೊನ್ನಪ್ಪ ಅವರು ಇಂದು ವನ್ಯ ಮೃಗ ಮತ್ತು ಮಾನವನೊಂದಿಗೆ ಸಂಘರ್ಷಗಳು ನಡೆಯುತ್ತಿದೆ ಅಲ್ಲದೆ ಕಾಡಾನೆಗಳು ಆಹಾರ ಅರಸಿ ನಾಡಿಗೆ ಬರುವ ಪರಿಸ್ಥಿತಿ ಉದ್ಭವವಾಗಿದೆ. ಅರಣ್ಯ ಅಂಚಿನಲ್ಲಿರುವ ತೋಟ ಮತ್ತು ಭತ್ತದ ಗದ್ದೆಗಳಿಗೆ ಕಾಡಾನೆಗಳು ನಿರಂತರವಾಗಿ ಧಾಳಿ ನಡೆಸಿ ಫಸಲು ನಾಶವಾಗುತ್ತಿದೆ. ಮುಂಬರುವ ದಿನಗಳಲ್ಲಿ ವೈಜ್ಞಾನಿಕವಾಗಿ ಕಾಡಾನೆಗಳನ್ನು ನಿಯಂತ್ರಿಸುವಲ್ಲಿ ಇಲಾಖೆಯ ವತಿಯಿಂದ ಕ್ರಮವಹಿಸಲಾಗುತ್ತದೆ ಎಂದು ಹೇಳಿದರು.
ಭೇಟಿಯ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸಿಗರಾದ ಅಜ್ಜಿಕುಟ್ಟೀರ ಅಪ್ಪಾಜಿ, ಮಾಜಿ ಜಿಲ್ಲಾ ಪಂಚಾಯಿತಿಯ ಸದಸ್ಯರಾದ ಎಂ.ಜಿ. ನಾರಾಯಣ, ಎಂ.ಎಂ. ಪೊನ್ನಪ್ಪ ಮತ್ತು ವಲಯ ಅರಣ್ಯಾಧಿಕಾರಿ ವಿರೇಂದ್ರ ಮತ್ತು ಇಲಾಖಾಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.