ಸೋಮವಾರಪೇಟೆ, ಜ.2 : ಮೂಡಿಗೆರೆಯ ಬಸವಿ ಗ್ರಾಮದಲ್ಲಿ ಒತ್ತುವರಿ ಕಾರಣ ನೀಡಿ ಕಾಫಿ ಹಾಗೂ ಕಾಳುಮೆಣಸು ತೋಟವನ್ನು ಅರಣ್ಯಾಧಿಕಾರಿಗಳು ಏಕಾಏಕಿ ನುಗ್ಗಿ ಯಂತ್ರೋಪಕರಣದೊಂದಿಗೆ ನೆಲಸಮ ಮಾಡಿರುವ ಕ್ರಮ ಖಂಡನೀಯ ಎಂದು ಸೋಮವಾರಪೇಟೆ ತಾಲೂಕು ಕಾಫಿ ಬೆಳೆಗಾರರ ಸಂಘ ಅಭಿಪ್ರಾಯಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ, ಜೀವನೋಪಾಯಕ್ಕಾಗಿ ಮೂಡಿಗೆರೆಯ ಬಸವಿ ಗ್ರಾಮದಲ್ಲಿ ನಾರಾಯಣಗೌಡ ಅವರು 15 ಎಕರೆ ಜಾಗದಲ್ಲಿ ಕಾಫಿ ಮತ್ತು ಮೆಣಸಿನ ಕೃಷಿ ಮಾಡಿಕೊಂಡಿದ್ದು, ಈ ಸ್ಥಳವನ್ನು ಅರಣ್ಯ ಒತ್ತುವರಿ ಎಂದು ಅರಣ್ಯಾಧಿಕಾರಿಗಳು ತಮ್ಮ ಇಲಾಖೆಯ ನೂರಕ್ಕೂ ಹೆಚ್ಚಿನ ಸಿಬ್ಬಂದಿಗಳು ಹಾಗೂ ಯಂತ್ರೋಪಕರಣದೊಂದಿಗೆ ಯಾವದೇ ಮುನ್ಸೂಚನೆ ನೀಡದೆ ನೆಲಸಮ ಮಾಡಿರುವದು ಖಂಡನೀಯ. ಇಂತಹ ಪ್ರಕರಣಗಳು ಮರುಕಳಿಸಿದ್ದಲ್ಲಿ ಕಾಫಿ ಬೆಳೆಯುವ ಎಲ್ಲ ಜಿಲ್ಲೆಗಳ ಕಾಫಿ ಬೆಳೆಗಾರರು ಉಗ್ರ ಪ್ರತಿಭಟನೆ ಮಾಡುವದಾಗಿ ಎಚ್ಚರಿಸಿದ್ದಾರೆ.