ಮಡಿಕೇರಿ, ಜ. 2: ಭಾರತೀಯ ವೈದ್ಯಕೀಯ ಪರಿಷತ್ (ಎಂ.ಸಿ.ಐ.) ಬದಲಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‍ಎಂಸಿ) ಸ್ಥಾಪಿಸುವ ನಿರ್ಧಾರ ಖಂಡಿಸಿ ಇಂದು ಖಾಸಗಿ ವೈದ್ಯರು ದೇಶವ್ಯಾಪಿ ಮುಷ್ಕರಕ್ಕೆ ಕರೆ ಕೊಟ್ಟಿದ್ದರು. ಎಲ್ಲಾ ಖಾಸಗಿ ಆಸ್ಪತ್ರೆಗಳ ಹೊರರೋಗಿ (ಒಪಿಡಿ) ವಿಭಾಗಗಳ ಸೇವೆ ಸ್ಥಗಿತಗೊಳಿಸಿ ಸಾಂಕೇತಿಕ ಪ್ರತಿಭಟನೆಗೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕರೆ ನೀಡಿತ್ತು. ಈ ಪ್ರತಿಭಟನೆಯ ಬಿಸಿ ಜಿಲ್ಲೆಯಲ್ಲಿ ಅಷ್ಟಾಗಿ ಸಮಸ್ಯೆಯಾಗಲಿಲ್ಲ.

ಜಿಲ್ಲೆಯಲ್ಲಿ ಒಟ್ಟು 12 ಖಾಸಗಿ ಆಸ್ಪತ್ರೆಗಳಿದ್ದು, ತುರ್ತು ಅಗತ್ಯತೆಗಳಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ ಹೆಚ್ಚು ಸಂದರ್ಶನ (ಅಪಾಯಿಂಟ್ ಮೆಂಟ್)ದ ಪ್ರಮಾಣವನ್ನು ಕಡಿಮೆ ಮಾಡಲಾಗಿತ್ತು. ಉಳಿದಂತೆ ಸಹಜವಾಗಿ ಕಾರ್ಯನಿರ್ವಹಣೆ ನಡೆದಿದೆ ಎಂದು ಐ.ಎಂ.ಎ. ಕೊಡಗು ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಅವರು ಮಾಹಿತಿ ನೀಡಿದರು. ಡಾ. ಬಿ.ಸಿ. ನವೀನ್ ಅವರೂ ಈ ಕುರಿತು ‘ಶಕ್ತಿ’ಗೆ ಮಾಹಿತಿಯಿತ್ತರು.