ನಾಪೋಕ್ಲು, ಜ. 1: ಮಕ್ಕಳಿಗೆ ಬಾಲ್ಯದಿಂದಲೇ ಸಾಹಿತ್ಯದತ್ತ ಆಸಕ್ತಿ ಬೆಳೆಸಲು ಕಸಾಪ ಘಟಕಗಳು ಕಾರ್ಯನಿರ್ವಹಿಸಬೇಕು. ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಹೇಳಿದರು.

ಇಲ್ಲಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಸಾಪ ನಾಪೋಕ್ಲು ಹೋಬಳಿ ಘಟಕದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕನ್ನಡ ನಮ್ಮ ಅನ್ನದ ಭಾಷೆಯಾಗಿದ್ದು ಕನ್ನಡ ಭಾಷಾಭಿಮಾನ ಬೆಳೆಸುವ ದೃಷ್ಟಿಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಶುದ್ಧ ಕನ್ನಡ ಬರೆಯುವ ಹಾಗೂ ಓದುವ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಚಿನ್ನದ ನಾಣ್ಯಗಳನ್ನು ನೀಡಿ ಪುರಸ್ಕರಿಸಲಾಗುತ್ತಿದೆ. ಹೋಬಳಿ ಮಟ್ಟದಲ್ಲಿ ಘಟಕಗಳನ್ನು ಸ್ಥಾಪಿಸುವದರ ಮೂಲಕ ಪರಿಷತ್ತಿನ ಸದಸ್ಯರು ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದರು. ಘಟಕದ ಗೌರವಾಧ್ಯಕ್ಷ ಬೊಪ್ಪೇರ ಕಾವೇರಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ತಾ. 8 ರಂದು ನಾಪೋಕ್ಲು ಹೋಬಳಿ ಘಟಕವನ್ನು ಉದ್ಘಾಟಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಕೊಡಗಿನ ಜಾನಪದ ಕಲೆಯ ಕುರಿತು ಡಿ.ಜೆ. ಪದ್ಮನಾಭ ದತ್ತಿನಿಧಿ ಕಾರ್ಯಕ್ರಮವನ್ನು ಘಟಕದ ವತಿಯಿಂದ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ, ಕಸಾಪ ಸದಸ್ಯರಾದ ಸಿ.ಎಸ್. ಸುರೇಶ್, ಎನ್.ಕೆ. ಪ್ರಭು, ಮನ್ಸೂರ್ ಅಲಿ, ಟಿ.ಆರ್. ಸುಬ್ಬಮ್ಮ, ಮತ್ತಿತರರು ಪಾಲ್ಗೊಂಡಿದ್ದರು. ಸಭೆಯ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಕಸಾಪ ಸದಸ್ಯ ಬಿದ್ದಾಟಂಡ ಬೆಳ್ಯಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.