ಮಡಿಕೇರಿ, ಜ. 1: ನಮ್ಮದು ಪ್ರಜಾ ಪ್ರಭುತ್ವ ರಾಷ್ಟ್ರ ವಾದ್ದರಿಂದ ಜನರು ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರತರಲು ಇದೊಂದು ಉತ್ತಮವಾದ ವೇದಿಕೆಯಾಗಿದೆ ಎಂದು ಪದವಿಪೂರ್ವ ಇಲಾಖೆಯ ಉಪ ನಿರ್ದೇಶಕ ಆರ್. ಮೋಹನ್ ತಿಳಿಸಿದರು. ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ, ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೊಸ್ಕರ ಇರುವದೇ ಪ್ರಜಾಪ್ರಭುತ್ವ, ನಮ್ಮದು ಕಲ್ಯಾಣ ರಾಜ್ಯ, ನಮ್ಮ ದೇಶದಲ್ಲಿ ಎಲ್ಲರೂ ಸೇರಿದರೆ ಮಾತ್ರ ಸರ್ಕಾರ ರಚನೆ ಮಾಡಲು ಸಾಧ್ಯ ಎಂದು ಹೇಳಿದರು.

ಯುವ ಸಂಸತ್ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಮುಂದಿನ ಸಾಧನೆಗೆ ಪೂರಕವಾಗಿದೆ ಮತ್ತು ಅವರಲ್ಲಿ ಉತ್ಸ್ಸಾಹ ಹೆಚ್ಚಿಸಲಿದೆ. ಹಾಗೆಯೇ ಯುವಕ-ಯುವತಿಯರು ಸ್ಪರ್ಧಾತ್ಮಕ ಮನೋಭಾವನೆ ಹೆಚ್ಚು ಬೆಳಸಿಕೊಳ್ಳಬೇಕು ಎಂದು ಹೇಳಿದರು. ಉಪ ವಿಭಾಗಾಧಿಕಾರಿಗಳಾದ ಡಾ. ನಂಜುಂಡೇಗೌಡ ಮಾತನಾಡಿ, ವಿದ್ಯಾರ್ಥಿಗಳು ತಮ್ಮೊಳಗಿರುವ ಪ್ರತಿಭೆಗಳನ್ನು ಹೊರತರಲು ಇದೊಂದು ಉತ್ತಮ ವೇದಿಕೆಯಾಗಿದೆ. ಸ್ಪರ್ಧಾತ್ಮಕ ಮನೋಭಾವನೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಎಂ. ಬೆಳ್ಯಪ್ಪ ಮಾತನಾಡಿ, ಸಂಸತ್ತಿನಲ್ಲಿ ನಡೆಯುವ ಕಲಾಪಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು.

ಸಂಸತ್ತಿನ ಮತ್ತು ಸಂವಿಧಾನದ ವಿಚಾರಗಳು ಮಕ್ಕಳಿಗೆ ತಿಳಿಯುವದರಿಂದ ವಿದ್ಯಾರ್ಥಿಗಳಿಗೆ ಮುಂದೆ ಉಪಯೋಗಕ್ಕೆ ಬರುತ್ತದೆ ಎಂದು ಹೇಳಿದರು. ಚಿದಾನಂದ ಅವರು ಯುವ ಸಂಸತ್ ಸ್ಪರ್ಧೆಯ ರೂಪುರೇಷೆಗಳನ್ನು ತಿಳಿಸಿದರು. ಸಂಸದೀಯ ವ್ಯವಹಾರಗಳ ಇಲಾಖೆಯ ಶಾಖಾಧಿಕಾರಿಗಳಾದ ಡಿ.ಬಿ. ಜನಾರ್ಧನ್, ಸಾರ್ವಜನಿಕ ಇಲಾಖೆಯ ವಿಷಯ ಪರಿವೀಕ್ಷಣಾ ಅಧಿಕಾರಿ ಸಾವಿತ್ರಿ ಇತರರು ಇದ್ದರು.