ಗೋಣಿಕೊಪ್ಪ ವರದಿ, ಜ. 1 : ವಿಜಾಪುರದಲ್ಲಿ ದಲಿತ ಬಾಲಕಿ ದಾನಮ್ಮ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ದಲಿತ ಮೀಸಲಾತಿ ರದ್ದು ಪಡಿಸುವ ಹೇಳಿಕೆಯನ್ನು ನೀಡಿದ ಪೇಜಾವರ ಶ್ರೀ ಹಾಗೂ ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಅನಂತ್ ಕುಮಾರ್ ಹೆಗಡೆ ವಿರುದ್ದ ತಿತಿಮತಿ ಬಂದ್ ಹಾಗೂ ರಸ್ತೆ ತಡೆ ಮೂಲಕ ದಸಂಸ ಪ್ರತಿಭಟನೆ ನಡೆಸಿತು.
ಚೈನ್ಗೇಟ್ನಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನೂರಾರು ಪ್ರತಿಭಟನಾಕಾರರು ಪಾಲ್ಗೊಂಡರು. ದಸಂಸ ಜಿಲ್ಲಾ ಸಂಚಾಲಕ ಪರಶುರಾಮ್ ಅವರು, ಸರ್ಕಾರ ಸಂತ್ರಸ್ತೆಗೆ ಪರಿಹಾರ ಹಾಗೂ ಸಮಾಜದಲ್ಲಿ ಗೌರವ ದೊರಕಿಸಿಕೊಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಸತೀಶ್ ಮಾತನಾಡಿ ಡಾ.ಅಂಬೇಡ್ಕರ್ ಅವರ ನಾಯಕತ್ವದಲ್ಲಿ ರಚಿಸಲಾದ ಸಂವಿದಾನಕ್ಕೆ ಬದಲಾವಣೆ ತರುವ ಅನಂತ್ ಕುಮಾರ್ ಹೆಗಡೆ ಮಾತುಗಳು ದಲಿತ ಹಾಗೂ ಹಿಂದುಳಿದ ವರ್ಗದವರ ಮನಸ್ಸಿಗೆ ನೋವು ತಂದಿದೆ. ರಾಜಕಾರಣಿಗಳು ಸಮಾಜವನ್ನು ಇಬ್ಬಾಗ ಮಾಡಿ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ತ್ವರಿತವಾಗಿ ಜಾಮೀನು ಸಿಗುತ್ತಿದೆ. ಕೇಂದ್ರ ಸರ್ಕಾರ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿದರು.
ಸಂಘಟನೆಯ ಪ್ರಮುಖರಾದ ರಜನಿಕಾಂತ್, ಹೆಚ್.ಇ ಶಿವಕುಮಾರ್, ಸತೀಶ್, ಕೃಷ್ಣಪ್ಪ, ತಾ.ಪಂ ಸದಸ್ಯೆ ಪಂಕಜ ಇದ್ದರು.