ಮಡಿಕೇರಿ, ಜ.1 : ಕೊಡಗು ಜಿಲ್ಲಾ ಪ್ರಬುದ್ಧ ನೌಕರರ ಒಕ್ಕೂಟ, ಅಶೋಕಪುರದ ಸಂತೋಷ್ ಯುವಕ ಸಂಘ, ಮಲ್ಲಿಕಾರ್ಜುನ ನಗರದ ಜ್ಯೋತಿ ಯುವಕ ಸಂಘ ಹಾಗೂ ನಗರದ ದಲಿತ ಮತ್ತು ಪ್ರಗತಿಪರ ಒಕ್ಕೂಟಗಳ ಸಹಯೋಗದಲ್ಲಿ ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆಯನ್ನು “ಶೌರ್ಯ ದಿನ”ವನ್ನಾಗಿ ನಗರದಲ್ಲಿ ಆಚರಿಸಲಾಯಿತು.

ನಗರದ ಇಂದಿರಾಗಾಂಧಿ ವೃತ್ತದಿಂದ ಕಾರ್ಯಪ್ಪ ವೃತ್ತದವರೆಗೆ ನಡೆದ ಪಂಜಿನ ಮೆರವಣಿಗೆ ಹಾಗೂ ಬೈಕ್ ರ್ಯಾಲಿಗೆ ಜಿಲ್ಲಾ ಆಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಡಾ.ದೇವದಾಸ್ ಚಾಲನೆ ನೀಡಿದರು.

ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ನಗರಸಭಾ ಸದಸ್ಯ ಹೆಚ್.ಎಂ. ನಂದಕುಮಾರ್ ಉದ್ಘಾಟಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಬುದ್ಧ ನೌಕರರ ಒಕ್ಕೂಟದ ಅಧ್ಯಕ್ಷ ಡಾ.ವಿ.ಎಸ್.ಸತೀಶ್ ಕೋರೆಗಾಂವ್ ಯುದ್ಧದ ಕುರಿತು ಮಾಹಿತಿ ನೀಡಿದರು. ಮನುವಾದಿಗಳ ಕಪಟದಿಂದ ಹುದುಗಿ ಹೋಗಿದ್ದ ಕೋರೆಗಾಂವ್ ವಿಜಯೋತ್ಸವದ ಸತ್ಯವನ್ನು ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಅವರು ಜಗತ್ತಿಗೆ ತೋರಿಸಿಕೊಟ್ಟರು. ಸಾಮಾಜಿಕ ದಬ್ಬಾಳಿಕೆಯ ಸಂಕೋಲೆಗಳಿಂದ ಹೊರ ಬರಲು 500 ಮಹಾನ್ ಸೈನಿಕರು 30 ಸಾವಿರದಷ್ಟು ಸಂಖ್ಯೆಯಲ್ಲಿದ್ದ 2ನೇ ಪೇಶ್ವೆ ಬಾಜಿರಾಯ ಅವರ ಸೈನ್ಯವನ್ನು ತಮ್ಮ ಯುದ್ಧ ನೈಪುಣ್ಯತೆಯಿಂದ ಸೋಲಿಸಿ ಸಾಮಾಜಿಕ ಪರಿವರ್ತನೆಗಾಗಿ ಹೋರಾಡಿದರು. ಈ ಧೈರ್ಯ, ಸಾಹಸಗಳು ರೋಮಾಂಚನ ಮತ್ತು ಸಾಮಾಜಿಕ ಪರಿವರ್ತನೆಯ ಅಮೋಘ ಘಟನೆಯಾಗಿದೆ ಎಂದು ವಿವರಿಸಿದರು.

ಇದೇ ಸಂದರ್ಭ ಡಾ. ಅಂಬೇಡ್ಕರ್ ಭವನದ ಎದುರು ಕೋರೆ ಗಾಂವ್ ಯುದ್ದದಲ್ಲಿ ಹುತಾತ್ಮರಾದ 22 ವೀರ ಯೋಧರ ಗೌರವಾರ್ಥ 22 ದೀಪಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಕೋರೆಗಾಂವ್ ಯುದ್ಧದ ವಿಜಯೋತ್ಸವದೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲಾಯಿತು. ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ 22 ಕೆಜಿ ತೂಕದ ಕೇಕ್‍ನ್ನು ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಡಾ.ದೇವದಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂತೋಷ್ ಯುವಕ ಸಂಘದ ಅಧ್ಯಕ್ಷ ಅವಿನ್ ಕುಮಾರ್, ಜ್ಯೋತಿ ಯುವಕ ಸಂಘದ ಅಧ್ಯಕ್ಷ ಹೆಚ್.ಕೆ.ಸುರೇಶ್, ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಹೆಚ್.ಎಲ್. ದಿವಾಕರ್, ರಾಮದಾಸ್, ಅರುಣ್ ಕುಮಾರ್, ಯತೀಶ್, ಚಂದ್ರಮೌಳಿ ಹಾಗೂ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಬೈಕ್ ರ್ಯಾಲಿ ಮತ್ತು ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.