ಮಡಿಕೇರಿ, ಡಿ. 31: ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ಪೋಟ್ರ್ಸ್ ವಲ್ರ್ಡ್ ಜಿಲ್ಲಾ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಚಾಂಪಿಯನ್ ಆಗಿ ಮಡಿಕೇರಿಯ ಎಂ.ವೈ.ಸಿ.ಸಿ. ತಂಡ ಹೊರಹೊಮ್ಮಿದೆ. ಇಂದು ನಡೆದ ಅಂತಿಮ ಪಂದ್ಯಾಟದಲ್ಲಿ ಎಂ.ವೈ.ಸಿ.ಸಿ. ತಂಡ ಇದೇ ಕ್ಲಬ್‍ನ ಮತ್ತೊಂದು ತಂಡವಾದ ಎಂ.ವೈ.ಸಿ.ಸಿ. (ಎ) ತಂಡವನ್ನು ಪರಾಭವಗೊಳಿಸಿ ಪ್ರಶಸ್ತಿ ಗಳಿಸಿತು.
ಜಿಲ್ಲೆಯ 17 ಕ್ಲಬ್ ತಂಡಗಳು ಅಪರೂಪವಾಗಿ ನಡೆಯುವ ಲೆದರ್ ಬಾಲ್ ಕ್ರಿಕೆಟ್‍ನಲ್ಲಿ ಭಾಗಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಎಂ.ವೈ.ಸಿ.ಸಿ. ತಂಡ 20 ಒವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 167 ರನ್ ಬಾರಿಸಿದರೆ, ಎಂ.ವೈ.ಸಿ.ಸಿ. (ಎ) ತಂಡ 79 ರನ್‍ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಪರಾಭವಗೊಂಡಿತು. ವಿಜೇತ ತಂಡದ ರಾಜು ಎಲ್.ಎಫ್. 76 ರನ್ ಬಾರಿಸುವ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿಯೊಂದಿಗೆ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಗಳಿಸಿದರು.
ವಿಜೇತ ತಂಡ ರೂ. 30 ಸಾವಿರ ನಗದು ಹಾಗೂ ಟ್ರೋಫಿ ಮತ್ತು ರನ್ನರ್ಸ್ ತಂಡ ರೂ. 20 ಸಾವಿರ ನಗದು ಹಾಗೂ ಟ್ರೋಫಿ ಪಡೆಯಿತು. ಎಂ.ವೈ.ಸಿ.ಸಿ. ಕ್ಲಬ್‍ನ ಸ್ಥಾಪಕ ಅಧ್ಯಕ್ಷ ಕಾಯಪಂಡ ಗಣೇಶ್ ಉತ್ತಪ್ಪ ಬಹುಮಾನ ವಿತರಿಸಿದರು. ಪಂದ್ಯಾವಳಿಯ ಪ್ರಾಯೋಜಕ ಅನ್ಸಫ್ ಹಾಜರಿದ್ದರು.