ಸಿದ್ದಾಪುರ, ಡಿ. 31: ಒತ್ತುವರಿ ಜಾಗವನ್ನು ಕಸ ವಿಲೇವಾರಿಗೆ ಹಸ್ತಾಂತರಿಸುವ ಸಂದರ್ಭ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದ ಘಟನೆ ಘಟ್ಟದಳದಲ್ಲಿ ನಡೆದಿದೆ.
ಇತ್ತೀಚೆಗೆ ಘಟ್ಟದಳದಲ್ಲಿ ಒತ್ತುವರಿಯಾಗಿದ್ದ 5 ಎಕರೆ ಜಾಗವನ್ನು ಕಂದಾಯ ಇಲಾಖೆ ತನ್ನ ವಶಕ್ಕೆ ಪಡೆದಿದ್ದು, ಸಿದ್ದಾಪುರ ಗ್ರಾ.ಪಂ.ಗೆ ಕಸ ವಿಲೇವಾರಿ ಮಾಡಲು ವಶಪಡಿಸಿದ ಜಾಗದಲ್ಲಿ ಅವಕಾಶ ಕಲ್ಪಿಸಲಾಗುವದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು.
ಜಾಗವನ್ನು ಸರ್ವೆ ನಡೆಸಿ ಸಿದ್ದಾಪುರ ಗ್ರಾ.ಪಂ.ಗೆ ಜಾಗವನ್ನು ನೀಡಲು ಮುಂದಾದ ಸಂದರ್ಭ ಕಸವಿಲೇವಾರಿ ಮಾಡಬಾರದೆಂದು ಸ್ಥಳೀಯರು ಹಾಗೂ ಮಾಲ್ದಾರೆ ಗ್ರಾಮಸ್ಥರು ಒತ್ತಾಯಿಸಿದರು. ಇದೇ ಸಂದರ್ಭ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು.
ಮಾಲ್ದಾರೆ ಗ್ರಾ.ಪಂ. ಸದಸ್ಯ ಸಜಿ ಥೋಮಸ್ ಮಾತನಾಡಿ, ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಈಗಾಗಲೇ 950 ಕ್ಕೂ ಹೆಚ್ಚು ನಿವೇಶನ ರಹಿತ ಕುಟುಂಬಗಳು ಅರ್ಜಿ ಸಲ್ಲಿಸಿದ್ದು, ಒತ್ತುವರಿ ಜಾಗವನ್ನು ನಿವೇಶನ ರಹಿತರಿಗೆ ನೀಡಬೇಕು. ಕಸ ವಿಲೇವಾರಿಯಿಂದ ಸ್ಥಳೀಯರಿಗೆ ತೊಂದರೆ ಎದುರಾಗಲಿದೆ. ಯಾವದೇ ಕಾರಣಕ್ಕೂ ಒತ್ತುವರಿ ತೆರವು ಮಾಡಿದ ಜಾಗದಲ್ಲಿ ಕಸ ವಿಲೇವಾರಿಗೆ ಬಿಡುವದಿಲ್ಲ ಎಂದರು.
ಸಿದ್ದಾಪುರ ಪಿ.ಡಿ.ಓ. ವಿಶ್ವನಾಥ್ ಮಾತನಾಡಿ, ಜಿಲ್ಲಾಧಿಕಾರಿಯವರು ಸದರಿ ಜಾಗದಲ್ಲಿ ಕಸವಿಲೇವಾರಿ ಮಾಡಲು ಸೂಚಿಸಿದ್ದು, ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಲಾಗುವದು ಎಂದು ಹೇಳಿದರು.
ಸ್ಥಳದಲ್ಲಿ ಕಂದಾಯ ನಿರೀಕ್ಷಕ ಅನಿಲ್, ಗ್ರಾಮ ಲೆಕ್ಕಿಗ ಮಂಜುನಾಥ್, ಗ್ರಾ.ಪಂ. ಸಿಬ್ಬಂದಿಗಳು ಇದ್ದರು.