ಮಡಿಕೇರಿ, ಡಿ. 30: ವೀರಾಜಪೇಟೆ ತಾಲೂಕು ಕೆ. ಬಾಡಗ ಗ್ರಾ.ಪಂ ವ್ಯಾಪ್ತಿಯ ತಿರುನಾಡಹಾಡಿ ಮತ್ತು ಚಂದನಕೆರೆ ಹಾಡಿ ನಿವಾಸಿಗಳಿಗೆ ಹಕ್ಕುಪತ್ರ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿರುವ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮುಂದಿನ 15 ದಿನಗಳೊಳಗೆ ಬೇಡಿಕೆ ಈಡೇರದಿದ್ದಲ್ಲಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವದಾಗಿ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷ ವೈ.ಕೆ. ಗಣೇಶ್, ಸುಮಾರು 25 ವರ್ಷಗಳ ಹಿಂದೆ ಖಾಸಗಿ ವ್ಯಕ್ತಿಗಳು ಆದಿವಾಸಿಗಳಿಗೆ ಭಯ ಮೂಡಿಸಿ ತಿರುನಾಡಹಾಡಿಯ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು, ಆದರೆ ಸಮಿತಿಯ ಹೋರಾಟದ ಫಲವಾಗಿ ಮೂರು ವರ್ಷಗಳ ಹಿಂದೆ ನಾಲ್ಕು ಎಕರೆ ಜಾಗವನ್ನು 29 ಕುಟುಂಬಗಳಿಗೆ ನೀಡಲಾಗಿದೆ. ಈ ಜಾಗದಲ್ಲಿ ವಾಸಿಸಲು ಸರಕಾರದ ಯಾವದೇ ಸೌಲಭ್ಯಗಳು ದೊರಕುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಿಯಮದ ಪ್ರಕಾರ ಕಾಡಿನ ಮಕ್ಕಳಾದ ನಮಗೆ ಕೃಷಿಭೂಮಿಗೂ ಹಕ್ಕು ಪತ್ರ ನೀಡಬೇಕಾಗಿತ್ತು. ಆದರೆ ಇಲ್ಲಿಯವರೆಗೆ ಹಕ್ಕುಪತ್ರ ವಿತರಿಸದೆ ಸುಮಾರು 4 ಎಕರೆ ಜಾಗವನ್ನು 29 ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಳ್ಳಲು ಹಂಚಿಕೆ ಮಾಡಲಾಗಿದೆ. ಐಟಿಡಿಪಿ ಇಲಾಖೆ ಮೂಲಕ ಮನೆಗಳು ಮಂಜೂರಾಗಿದ್ದರೂ, ಮನೆ ನಿರ್ಮಿಸಿ ಕೊಳ್ಳಲು ಬೇಕಾಗಿ ರುವ ಸಾಮಗ್ರಿಗಳನ್ನು ಕೊಂಡೊಯ್ಯಲು ರಸ್ತೆ ಸೌಲಭ್ಯವೇ ಇಲ್ಲದಾಗಿದೆ. ನಾಲ್ಕು ಅಡಿಯಷ್ಟು ಕಾಲುದಾರಿ ವ್ಯವಸ್ಥೆ ಮಾತ್ರವಿದ್ದು, ಪಕ್ಕದ ಹಾಡಿ ಚಂದನಕೆರೆ ಮೂಲಕ ಹಾದು ಹೋಗಲು 4 ಕಿ.ಮೀ. ಕ್ರಮಿಸ ಬೇಕಾಗುತ್ತದೆ ಎಂದು ಗಣೇಶ್ ಅಸಹಾಯಕತೆ ವ್ಯಕ್ತಪಡಿಸಿದರು. ಈ ಹಿಂದೆ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ರಸ್ತೆ ಮತ್ತು ಸೇತುವೆ ನಿರ್ಮಿಸಿಕೊಡಬೇಕೆಂದು ಅರ್ಜಿ ಮೂಲಕ ಮನವಿ ಸಲ್ಲಿಸಲಾಗಿತ್ತು. ಆದರೆ ಮೂರು ತಿಂಗಳು ಕಳೆದರೂ ಯಾವದೇ ಸ್ಪಂದನೆ ದೊರೆತ್ತಿಲ್ಲ. ಚಂದನಕೆರೆಯಲ್ಲಿ 39 ಹಾಗೂ ತಿರುನಾಡ ಹಾಡಿಯಲ್ಲಿ 29 ಕುಟುಂಬಗಳಿದ್ದು, ಅಗತ್ಯ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಮನೆಗಳಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದ್ದು, ಉಳಿದ ಕೃಷಿಭೂಮಿಗೂ ಹಕ್ಕು ಪತ್ರ ನೀಡಲು ಸರ್ವೇಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ತಿರುನಾಡಹಾಡಿ ಅಧ್ಯಕ್ಷ ಪಿ.ಎಂ. ತಮ್ಮು ಹಾಗೂ ಚಂದನಕೆರೆ ಹಾಡಿ ಅಧ್ಯಕ್ಷೆ ಪಿ.ಎಂ. ಕಾವೇರಿ ಮಾತನಾಡಿ, ಶೀಘ್ರ ರಸ್ತೆ ಮತ್ತು ಸೇತುವೆಯನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಹಿಂದಿನ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿದ್ದರೂ ಇಲ್ಲಿಯವರೆಗೆ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದ ಅವರು ಜಿಲ್ಲಾಧಿ ಕಾರಿಗಳು ಖುದ್ದು ಹಾಡಿಗಳಿಗೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಸೂಚಿಸ ಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ವೈ.ಎ. ರವಿ, ಪ್ರಮುಖರಾದ ಪಿ.ಜೆ. ಅಶೋಕ್ ಹಾಗೂ ಜೆ.ಕೆ. ಮಿಲನ ಉಪಸ್ಥಿತರಿದ್ದರು.