ಸಿದ್ದಾಪುರ, ಡಿ. 30: ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬಾಡಗ ಬಾಣಂಗಾಲ ಗ್ರಾಮದ ಬಜೆಕೊಲ್ಲಿ ಪೈಸಾರಿಗೆ ತೆರಳುವ ರಸ್ತೆಯನ್ನು ಅಗಲೀಕರಣಗೊಳಿಸಿ ಕೊಡದಿದ್ದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವದು ಮಾಜಿ ತಾ.ಪಂ ಸದಸ್ಯ ಸಿ.ಎ. ಹಂಸ ಎಚ್ಚರಿಕೆ ನೀಡಿದ್ದಾರೆ. ಬಜೆಕೊಲ್ಲಿ ಪೈಸಾರಿಗೆ ಭೇಟಿ ನೀಡಿದ ಹಂಸ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ 25 ವರ್ಷಗಳಿಂದ ಬಜೆಕೊಲ್ಲಿ ಪೈಸಾರಿಯಲ್ಲಿ 45 ಕ್ಕೂ ಅಧಿಕ ಕುಟುಂಬಗಳು ಖಾಯಂ ಆಗಿ ವಾಸ ಮಾಡಿಕೊಂಡಿದ್ದು ಆ ಭಾಗದ ಮಂದಿಗೆ ತುರ್ತು ಸಂದರ್ಭದಲ್ಲಿ ಸಂಚಾರಿಸಲು ಅಗತ್ಯವಾದ ರಸ್ತೆ ಸಂಪರ್ಕ ಇಲ್ಲದ ಹಿನ್ನಲೆಯಲ್ಲಿ ರಸ್ತೆ ಸಂಪರ್ಕವನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬಜೆಕೊಲ್ಲಿ ಪೈಸಾರಿ ಮಾಜಿ ಗ್ರಾ.ಪಂ. ಸದಸ್ಯ ಮಹಮ್ಮದ್ ಆಲಿ ಹಾಗೂ ಇತರರು ಹಾಜರಿದ್ದರು.