ಮಡಿಕೇರಿ, ಡಿ. 30: ಹೆದ್ದಾರಿ ಬದಿ ಮದ್ಯದಂಗಡಿ ನಿಷೇಧವಾದ ಬಳಿಕ ಸಂಪಾಜೆ ವ್ಯಾಪ್ತಿಯಲ್ಲಿ ಮದ್ಯದಂಗಡಿಗೆ ಅವಕಾಶ ನೀಡಬಾರದೆಂದು ಗ್ರಾಮಸ್ಥರು ತೀರ್ಮಾನ ಕೈಗೊಂಡಿದ್ದರು. ಆದರೂ ಮನೆಯೊಂದರಲ್ಲಿ ಮದ್ಯದಂಗಡಿ ತೆರೆಯಲು ಅಬಕಾರಿ ಅಧಿಕಾರಿಗಳು ರಾತ್ರೋರಾತ್ರಿ ಸರ್ವೆ ಮಾಡಿದ ಕ್ರಮವನ್ನು ವಿರೋಧಿಸಿ, ಯಾವದೇ ಕಾರಣಕ್ಕೂ ಮದ್ಯದಂಗಡಿಗೆ ಅವಕಾಶ ನೀಡಬಾರದೆಂದು ಆಗ್ರಹಿಸಿ ಸಂಪಾಜೆ ಗ್ರಾಮಸ್ಥರು ಅಬಕಾರಿ ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.

ಸಂಪಾಜೆ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಯ ಪರಾವನಗಿಯೊಂದಿಗೆ ನ್ಯಾಶನಲ್ ವೈನ್ಸ್ ಸಂಸ್ಥೆಯವರು ಹೆದ್ದಾರಿಯಿಂದ ದೂರದಲ್ಲಿರುವ ವಿಜಯಕುಮಾರ್ ಅವರ ಮನೆಯಲ್ಲಿ ಅಂಗಡಿ ತೆರೆಯಲು ಮುಂದಾಗಿದ್ದು, ಈ ಸಂಬಂಧ ಅಬಕಾರಿ ಇಲಾಖೆ ನಿರೀಕ್ಷಕ ಯಶವಂತ್ ಹಾಗೂ ಸಿಬ್ಬಂದಿಗಳು ಮಂಗಳವಾರ ರಾತ್ರಿ ವೇಳೆ ಸರ್ವೆ ಕಾರ್ಯಕ್ಕೆ ಮುಂದಾಗಿದ್ದರು. ಈ ಸಂದರ್ಭ ಗ್ರಾಮಸ್ಥರು ಅಧಿಕಾರಿಗಳಿಗೆ ದಿಗ್ಭಂಧನ ಹೇರಿದ್ದರು. ಪೊಲೀಸರ ಮಧ್ಯಸ್ಥಿಕೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿತ್ತು. ಈ ಹಿನ್ನೆಲೆ ತಾ. 22 ರಂದು ಗ್ರಾಮಸ್ಥರು ಜಿಲ್ಲಾ ಅಬಕಾರಿ ಅಧೀಕ್ಷಕರ ಕಚೇರಿಗೆ ತೆರಳಿ ರಾತ್ರೋರಾತ್ರಿ ಸರ್ವೆ ಕಾರ್ಯ ಕೈಗೊಂಡ ಬಗ್ಗೆ ಆಕ್ಷೇಪಿಸಿದರಲ್ಲದೆ ಯಾವದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅವಕಾಶ ನೀಡುವದಿಲ್ಲ ವೆಂದು ಮನವಿ ಸಲ್ಲಿಸಿದರು. ಮನೆಯಲ್ಲಿ ಯಾವ ಮಾನದಂಡದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಿದ್ದೀರಾ ಎಂದು ತರಾಟೆಗೆ ತೆಗೆದು ಕೊಂಡರು. ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ಕಳಗಿ ನೇತೃತ್ವದಲ್ಲಿ ಜಿ.ಪಂ. ಸದಸ್ಯ ಕುಮಾರ, ಚೆದ್ಕಾರ್ ಕುಮಾರ್, ಜಯಕುಮಾರ್, ಸುರೇಶ್, ಕೇಶವ, ನಾರಾಯಣ, ದಯಾನಂದ, ಹೊನ್ನಪ್ಪ, ಲೋಹಿತ್, ಕುಸುಮ, ಪುಷ್ಪಾವತಿ ಇನ್ನಿತರರು ಪಾಲ್ಗೊಂಡಿದ್ದರು.