ಸೋಮವಾರಪೇಟೆ, ಡಿ. 29: ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಸಮಾನ ಜವಾಬ್ದಾರಿ ಹೊರಬೇಕು. ಕಲೆಗಳ ಉಳಿವಿಗೆ ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು ಎಂದು ಜಾನಪದ ಪರಿಷತ್ ತಾಲೂಕು ಗೌರವಾಧ್ಯಕ್ಷೆ ಹಾಗೂ ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅಭಿಪ್ರಾಯಿಸಿದರು.
ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಹೋಬಳಿ ಜಾನಪದ ಪರಿಷತ್ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಇಂದಿಗೂ ಜೀವಂತವಿರುವ ಜಾನಪದ ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಯುವ ಜನಾಂಗಕ್ಕೆ ಜನಪದ ಜೀವನದ ಶ್ರೀಮಂತಿಕೆಯ ಪರಿಚಯ ಮಾಡಿಸಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಈಗಾಗಲೇ ಪರಿಷತ್‍ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಆಸಕ್ತರು ಸದಸ್ಯತ್ವ ಪಡೆದುಕೊಳ್ಳಬಹುದು. ಅಳಿವಿನಂಚಿನಲ್ಲಿರುವ ಕಲೆ, ಸಂಸ್ಕøತಿ, ಆಚಾರ, ವಿಚಾರ, ಪದ್ಧತಿ, ಪರಂಪರೆಗಳ ಬಗ್ಗೆ ಜಾಗೃತಿ ಮೂಡಿಸಿ, ಅವುಗಳನ್ನು ಉಳಿಸುವತ್ತ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಮುಂದಿನ ದಿನಗಳಲ್ಲಿ ಕುಶಾಲನಗರ ಮತ್ತು ಸುಂಟಿಕೊಪ್ಪದಲ್ಲೂ ಹೋಬಳಿ ಸಮಿತಿಗಳನ್ನು ರಚಿಸಿ ಪರಿಷತ್‍ನ ಕಾರ್ಯವನ್ನು ವಿಸ್ತರಿಸಲಾಗುವದು ಎಂದು ಚಂದ್ರಮೋಹನ್ ತಿಳಿಸಿದರು. ಸೋಮವಾರಪೇಟೆ ಹೋಬಳಿ ಘಟಕದ ಅಧ್ಯಕ್ಷ ಎಸ್.ಎ. ಮುರಳೀಧರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನವರಿ 6 ರಂದು ಜಿಲ್ಲಾ ಜಾನಪದ ಪರಿಷತ್ ಮತ್ತು ಯುವ ಸಬಲೀಕರಣ ಇಲಾಖೆ, ಸೂರ್ಲಬ್ಬಿ ನಾಡಿನ ಆಶ್ರಯದಲ್ಲಿ ಸೂರ್ಲಬ್ಬಿ ಶಾಲಾ ಆವರಣದಲ್ಲಿ ಜಾನಪದ ಕ್ರೀಡೋತ್ಸವ ಅಂಗವಾಗಿ ಪುರುಷರಿಗೆ ವಾಲಿಬಾಲ್, ರೆಗ್ಗೆ, ತೆಂಗೆ ಪುರಿ, ಹಗ್ಗಜಗ್ಗಾಟ, ಗೋಣಿತ್ತಾಟ್ ಓಟ, ಮಹಿಳೆಯರಿಗೆ ಕಬಡ್ಡಿ, ಚಿಲ್ಕಿ, ಕಲ್ಲಾಟ, ಹಗ್ಗಜಗ್ಗಾಟ, ಗೋಣಿತ್ತಾಟ್ ಓಟ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಾನಪದ ಕಲೆ, ಕ್ರೀಡೆಗಳನ್ನು ಉಳಿಸುವ ನಿಟ್ಟಿನಲ್ಲಿ ಆಸಕ್ತರು ಪರಿಷತ್‍ನೊಂದಿಗೆ ಕೈಜೋಡಿಸಬೇಕು ಎಂದ ಅವರು, ಮುಂದಿನ ದಿನಗಳಲ್ಲಿ ಪರಿಷತ್‍ನಿಂದ ಜಾನಪದ, ಸಾಂಸ್ಕøತಿಕ ವಿಚಾರ ವಿನಿಮಯಕ್ಕಾಗಿ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗುವದು ಎಂದರು.
ವೇದಿಕೆಯಲ್ಲಿ ಪರಿಷತ್‍ನ ಹೋಬಳಿ ಉಪಾಧ್ಯಕ್ಷ ನ.ಲ. ವಿಜಯ, ಸಂದ್ಯಾ ಕೃಷ್ಣಪ್ಪ, ಕಾರ್ಯದರ್ಶಿ ಎಂ.ಎ. ರುಬೀನಾ ಉಪಸ್ಥಿತರಿದ್ದರು.