ಮಡಿಕೇರಿ, ಡಿ. 29: ಶಿರಂಗಾಲ ನಿವಾಸಿ ಬಿ.ಡಿ. ಜಯೇಂದ್ರ ಎಂಬಾತ ತನ್ನ ಪತ್ನಿ ಜಯಂತಿ ಎಂಬಾಕೆಗೆ ವರದಕ್ಷಿಣೆ ಹಿಂಸೆ ನೀಡಿ ಕೊಲೆ ಮಾಡಿರುವ ಆರೋಪ ಮೇರೆಗೆ ಇಲ್ಲಿನ ಒಂದನೇ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಶಿಕ್ಷೆ ವಿಧಿಸಿದೆ. ಆರೋಪಿ ಹಾಕತ್ತೂರು ಬಳಿ ತೊಂಬತ್ತುಮನೆ ಪೈಸಾರಿ ನಿವಾಸಿ ಬಿ.ಎಸ್. ವಿಶ್ವನಾಥ್ ಪುತ್ರಿ ಜಯಂತಿಯನ್ನು ವಿವಾಹವಾಗಿದ್ದು, ತಾ. 13.12.2009ರಂದು ಸಂಬಂಧಿಕರೊಂದಿಗೆ ವರದಕ್ಷಿಣೆಗಾಗಿ ಪೀಡಿಸಿದ್ದು, ಹಿಂಸೆ ತಾಳಲಾರದೆ ಆಕೆ ಮರುದಿನ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಳು.
ಈ ಬಗ್ಗೆ ಪೊಲೀಸರು ಜಯೇಂದ್ರ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತುಗೊಂಡ ಮೇರೆಗೆ ಆರೋಪಿಗೆ ಪ್ರತ್ಯೇಕ ಕಾರಣಗಳಿಗಾಗಿ ಒಟ್ಟು ರೂ. 17500 ದಂಡ ಹಾಗೂ ಪ್ರತ್ಯೇಕ ಕಾಯ್ದೆಯಡಿ ಒಟ್ಟಾರೆ 9 ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ ನ್ಯಾಯಾಧೀಶರಾದ ಪವನೇಶ್ ಅವರು ದಂಡ ಹಣದಲ್ಲಿ ರೂ. 15 ಸಾವಿರವನ್ನು ಮೃತಳ ತಂದೆ ಬಿ.ಎಸ್. ವಿಶ್ವನಾಥ್ ಅವರಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ. ಸರಕಾರಿ ಅಭಿಯೋಜಕಿ ಕೃಷ್ಣವೇಣಿ ಸರಕಾರದ ಪರ ವಾದಿಸಿದ್ದರು.