ಸೋಮವಾರಪೇಟೆ, ಡಿ. 29: “2018ರಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ತಾನು ಕಾಂಗ್ರೆಸ್ ಸೇರ್ಪಡೆಗೊಳ್ಳುವ ದಾಗಿ ಕೆಲವರು ಊಹಾಪೋಹದ ಮಾತು ಗಳನ್ನಾಡುತ್ತಿದ್ದು, ಚಿನ್ನದ ತಟ್ಟೆಯಲ್ಲಿಟ್ಟು ಟಿಕೇಟ್ ಕೊಟ್ಟರೂ ಕಾಂಗ್ರೆಸ್‍ನಿಂದ ಸ್ಪರ್ಧಿಸುವದಿಲ್ಲ” ಎಂದು ಮಾಜೀ ಸಚಿವ, ಜೆಡಿಎಸ್ ಮುಖಂಡ ಬಿ.ಎ. ಜೀವಿಜಯ ‘ಶಕ್ತಿ’ ಯೊಂದಿಗೆ ಖಚಿತ ನುಡಿಯಾಡಿದ್ದಾರೆ.

ಜೀವಿಜಯ ಅವರು ಕಾಂಗ್ರೆಸ್‍ನಿಂದ ಟಿಕೇಟ್ ತರಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‍ನೊಂದಿಗೆ ಸಂಪರ್ಕದಲ್ಲಿದ್ದು, ಅವರೇ ಟಿಕೇಟ್ ತಂದು ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಗಲಿದ್ದಾರೆ ಎಂಬ ಮಾತುಗಳು ರಾಜಕೀಯ ಚರ್ಚಾ ಮುನ್ನೆಲೆಗೆ ಬಂದಿರುವ ಬಗ್ಗೆ ‘ಶಕ್ತಿ’ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಜೀವಿಜಯ, ‘ನೂರಕ್ಕೆ ನೂರು ನಾನು ಜೆಡಿಎಸ್ ಅಭ್ಯರ್ಥಿಯೇ ಹೊರತು ಕಾಂಗ್ರೆಸ್ ಅಭ್ಯರ್ಥಿಯಾಗುವದಿಲ್ಲ ಎಂದು’ ಸ್ಪಷ್ಟಪಡಿಸಿದರು.

‘ತಾನು ಕಾಂಗ್ರೆಸ್ ಪಕ್ಷದ ಸದಸ್ಯನೇ ಅಲ್ಲ; ಆ ಪಕ್ಷದಲ್ಲೇ ಹಲವಾರು ಮಂದಿ ಟಿಕೇಟ್ ಆಕಾಂಕ್ಷಿಗಳಿದ್ದಾರೆ. ಅವರಾಗಿಯೇ ಕರೆದು ನನಗೆ ಟಿಕೇಟ್ ಕೊಟ್ಟರೂ ಕಾಂಗ್ರೆಸ್ ಸೇರುವದಿಲ್ಲ. ಜೀವಿಜಯ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬದು ಕೇವಲ ಊಹಾಪೋಹವಷ್ಟೇ. ಇಂತಹ ಹೇಳಿಕೆಗಳಿಂದ ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುವ ಹುನ್ನಾರ ನಡೆಸಲಾಗುತ್ತಿದೆ. ಇಂತಹ ಹೇಳಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ನೀಡಬಾರದು’ ಎಂದು ಜೀವಿಜಯ ನುಡಿದರು.

ಜೀವಿಜಯ-ಸಂಕೇತ್ ಅಭ್ಯರ್ಥಿ: ಜಾತ್ಯತೀತ ಜನತಾದಳ ಪಕ್ಷ ಕೊಡಗಿನಲ್ಲಿ ಸಂಘಟಿತವಾಗುತ್ತಿದೆ. ಮಡಿಕೇರಿ ವಿಧಾನ ಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ತಾನು ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ಸಂಕೇತ್ ಪೂವಯ್ಯ ಅವರು ಅಭ್ಯರ್ಥಿಯಾಗಿ ಕಣಕ್ಕಿಳಿಯುವದು ಖಚಿತ. ಪ್ರಥಮ ಹಂತದಲ್ಲಿ ಈಗಾಗಲೇ ತಾನೂ ಸೇರಿದಂತೆ 120 ಮಂದಿಗೆ ಪಕ್ಷದ ವರಿಷ್ಠರು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಎರಡನೇ ಹಂತದಲ್ಲಿ ಸಂಕೇತ್ ಪೂವಯ್ಯ ಅವರಿಗೆ ಸೂಚನೆ ಬರಲಿದ್ದು, ನೂರಕ್ಕೆ ನೂರರಷ್ಟು ಅವರೇ ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಿದರು.

- ವಿಜಯ್ ಹಾನಗಲ್