ಪೊನ್ನಂಪೇಟೆ, ಡಿ. 29: ಕೊಡಗಿನ ಜನರಲ್ಲಿ ಪಾರಂಪರಿಕವಾಗಿ ಬಂದಿರುವ ಹಾಕಿ ಕ್ರೀಡೆ ದೇಶದಲ್ಲೆ ಪ್ರಸಿದ್ಧಿ ಪಡೆದಿದೆ. ಹಾಕಿ ಪಟುಗಳ, ಸೈನಿಕರ ಮತ್ತು ಕಾಫಿಯ ಹೆಸರಿನಲ್ಲಿ ಗುರುತಿಸಿಕೊಳ್ಳುವ ಕೊಡಗು ಜಿಲ್ಲೆ ಹಾಕಿಯ ತವರೂ ಹೌದು. ಮುಂದೆಯು ಹಾಕಿ ಕ್ರೀಡೆ ಮುಂದುವರಿಯಬೇಕಿದೆ. ಇದನ್ನು ಉಳಿಸುವಲ್ಲಿ ಯುವ ಜನಾಂಗದ ಪಾತ್ರ ಬಹು ಮುಖ್ಯವಾದದ್ದು ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು.
ಕಂಡಂಗಾಲದ ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ (ಯು.ಎಸ್.ಸಿ) ಬೇರಳಿನಾಡ್ ವತಿಯಿಂದ ಹಾಕಿ ಕೂರ್ಗ್ನ ಸಹಯೋಗದಲ್ಲಿ ಕಂಡಂಗಾಲದ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ನಡೆದ 5ನೇ ವರ್ಷದ ಚಂದೂರ ಕಮಲ ಸ್ಮಾರಕ ಆಹ್ವಾನಿತ ತಂಡಗಳ ಜಿಲ್ಲಾ ಮಟ್ಟದ ಪುರುಷರ ಹಾಕಿ ಪಂದ್ಯಾವಳಿ ‘ಲೋಟಸ್ ಕಪ್ 2017’ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಹಾಕಿ ಕ್ರೀಡೆಯಿಂದಾಗಿ ಕೊಡಗಿನ ಸಾಕಷ್ಟು ಯುವಕರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಇದರಿಂದಾಗಿ ಕ್ರೀಡೆಯಿಂದಲೂ ಭವಿಷ್ಯವಿದೆ ಎಂಬದು ಸಾಬೀತಾಗಿದೆ ಎಂದರು. ಮತ್ತೋರ್ವ ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಮಾತನಾಡಿ, ಕ್ರೀಡಾಕೂಟಗಳು ಹೆಚ್ಚು ಹೆಚ್ಚಾಗಿ ಜರುಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ ಚಿಟ್ಯಣ್ಣ ಮಾತನಾಡಿ, ಕ್ರೀಡೆಯಿಂದ ಜನರಲ್ಲಿ ಕ್ರೀಡಾ ಮನೋಭಾವ ವೃದ್ಧಿಸುತ್ತದೆ ಎಂದರು. ರುದ್ರಗುಪ್ಪೆಯ ವಿ.ಎಸ್.ಎಸ್.ಎನ್.ನ ಅಧ್ಯಕ್ಷ ಕೊಂಗಡ ವಾಸು ಮುದ್ದಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಸೇವೆಗಾಗಿ ಕಂಡಂಗಾಲದ ಹಿರಿಯ ಸಹಕಾರಿಗಳಾದ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಯು.ಎಸ್.ಸಿ. ಬೇರಳಿನಾಡಿನ ಅಧ್ಯಕ್ಷ ಚಂದೂರ ಸಂದೇಶ್ ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಯೋಜಕರಾದ ಡಾ. ಚಂದೂರ ಬಿದ್ದಪ್ಪ, ಡಾ. ಚಂದೂರ ವದಿನ್ ಬಿದ್ದಪ್ಪ, ಡಾ. ಮಮತ ಬಿಟ್ಟಂಗಾಲ ಗ್ರಾ.ಪಂ. ಸದಸ್ಯ ಪವಿ ಪೂವಯ್ಯ, ಹಾಕಿ ಕೂರ್ಗ್ನ ಕಾರ್ಯದರ್ಶಿ ಪಳಗಂಡ ಲವ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಪಂದ್ಯಾವಳಿಯ ಸಮಾರೋಪದ ಅಂಗವಾಗಿ ನಡೆದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ವಿಜೇತರಾದ ಮಾಳೆಯಂಡ ವಿನು (ಪ್ರಥಮ ಸ್ಥಾನ), ಮಣವಟ್ಟಿರ ನಿಲ್ಮ ಪೊನ್ನು (ದ್ವಿತೀಯ) ಹಾಗೂ ಪ್ರಸನ್ನ ಕುಮಾರ್ (ತೃತೀಯ) ಅವರಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಬಹುಮಾನ ವಿತರಿಸಿದರು. ಈ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಒಟ್ಟು 32 ಸ್ಪರ್ಧಿಗಳು ಭಾಗವಹಿಸಿದ್ದರು. ವಿದ್ಯಾರ್ಥಿನಿ ಬೋಜಮ್ಮ ಪ್ರಾರ್ಥಿಸಿದರು. ನಿರನ್ ನಾಚಪ್ಪ ಸ್ವಾಗತಿಸಿದರು. ಅಜ್ಜಮಾಡ ಪೊನ್ನಪ್ಪ ಕಾರ್ಯಕ್ರಮ ನಿರೂಪಿಸಿದರೆ, ಮೂಕಚಂಡ ಪ್ರಸನ್ನ ವಂದಿಸಿದರು. ಕಾರ್ಯಕ್ರಮದ ನಂತರ ವೀರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಿಂದ ಕೊಡವ ಸಾಂಪ್ರದಾಯಿಕ ನೃತ್ಯ ‘ಉಮ್ಮತ್ತಾಟ್’ ಪ್ರದರ್ಶನ ನಡೆಯಿತು.