ಸೋಮವಾರಪೇಟೆ,ಡಿ.29: ನಾಳೆ ವೀರಾಜಪೇಟೆಯಲ್ಲಿ ಭಾರತ ಕಮ್ಯೂನಿಷ್ಟ್ ಪಕ್ಷದ 2ನೇ ಜಿಲ್ಲಾ ಮಟ್ಟದ ಸಮ್ಮೇಳನ ತಾ. 31 ರಂದು ನಡೆಯಲಿದೆ ಎಂದು ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ. ಸೋಮಪ್ಪ ತಿಳಿಸಿದ್ದಾರೆ.

ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ವೀರಾಜಪೇಟೆ ಪಟ್ಟಣದ ಟೌನ್‍ಹಾಲ್‍ನಲ್ಲಿ ಕಾ|| ಚಕ್ಕೇರ ಮೊಣ್ಣಯ್ಯ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ದೇಶದಲ್ಲಿ ದಲಿತರು ಹಾಗೂ ಮಹಿಳೆಯರ ಮೇಲೆ ನಿರಂತರ ಹಲ್ಲೆ ಪ್ರಕರಣಗಳು ನಡೆಯುತ್ತಿವೆ. ದಿನ ನಿತ್ಯದ ಸಾಮಗ್ರಿಗಳ ಮೇಲೆ ದುಪ್ಪಟ್ಟು ತೆರಿಗೆ ವಿಧಿಸುತ್ತಿರುವದರಿಂದ ಜನರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಉಳ್ಳವರಿಂದ ಜನಸಾಮಾನ್ಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಆದರೆ, ಇದನ್ನು ಕೇಳಬೇಕಾದ ಜನಪ್ರತಿನಿಧಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ಜಿಲ್ಲೆಯಲ್ಲಿ ನಿವೇಶನ ರಹಿತರ ಪರವಾಗಿ, ಆನೆ ಹಾವಳಿ, ಪಡಿತರ ಚೀಟಿ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ವಿರುದ್ಧ ಹಲವಾರು ಹೋರಾಟಗಳನ್ನು ಪಕ್ಷದ ವತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟದ ರೂಪುರೇಷೆಗಳನ್ನು ಸಮ್ಮೇಳನದಲ್ಲಿ ಸಿದ್ದಪಡಿಸಲಾಗುವದು ಎಂದು ಸೋಮಪ್ಪ ತಿಳಿಸಿದರು.

ಸಮ್ಮೇಳನಕ್ಕೆ ಸಿಪಿಐ ರಾಜ್ಯ ಕಾರ್ಯದರ್ಶಿ ಪಿ.ವಿ. ಲೋಕೇಶ್, ಸಹಕಾರ್ಯದರ್ಶಿ ಸಾತಿ ಸುಂದರೇಶ್, ರಾಜ್ಯ ಸಮಿತಿ ಸದಸ್ಯ ಕೆ. ಗುಣಶೇಖರ್, ರಾಧ ಸುಂದರೇಶ್, ಹಾಸನ ಜಿಲ್ಲಾ ಕಾರ್ಯದರ್ಶಿ ಎಂ.ಸಿ. ಕೊಂಗ್ರೆ, ಕೊಡಗು ಜಿಲ್ಲಾ ಸಹಕಾರ್ಯದರ್ಶಿ ರಮೇಶ್ ಮಾಯಮುಡಿ, ಎಂ.ಕೆ. ಮೋಹನ್, ಧರ್ಮರಾಜ್, ರಫೀಕ್ ನವಲ್ಗುಂದ, ರಜನಿಕಾಂತ್ ಹಾಗೂ ಮುಖ್ಯ ಅತಿಥಿಗಳಾಗಿ ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಸಂತೋಷ್‍ಕುಮಾರ್ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. ಗೋಷ್ಠಿಯಲ್ಲಿ ಎಐಟಿಯುಸಿ ಜಿಲ್ಲಾ ಘಟಕದ ಖಜಾಂಚಿ ಪಿ.ಟಿ. ಸುಂದರ, ಸದಸ್ಯರಾದ ರಮೇಶ್, ಕೆ.ಎಸ್. ಹೂವಪ್ಪ, ಎಚ್.ಕೆ. ಈರಪ್ಪ ಉಪಸ್ಥಿತರಿದ್ದರು.