ಕೂಡಿಗೆ, ಡಿ. 29: ಕೋವರ್‍ಕೊಲ್ಲಿ - ಕೂಡಿಗೆ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿ ಮುಲ್ಲೇನಹಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಲಾಯಿತು.
18 ಕೋಟಿ ವೆಚ್ಚದಲ್ಲಿ ಕೋವರ್‍ಕೊಲ್ಲಿಯಿಂದ ಕೂಡಿಗೆವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮುಲ್ಲೇನಹಳ್ಳಿ ಗ್ರಾಮದಲ್ಲಿರುವ ರಸ್ತೆ ಮೋರಿಯನ್ನು ಹೊಸದಾಗಿ ನಿರ್ಮಿಸದೇ ಹಳೇ ಮೋರಿಯ ಮೇಲೆ ರಸ್ತೆ ನಿರ್ಮಿಸಲು ಮುಂದಾಗಿದ್ದು, ರಸ್ತೆ ಮಧ್ಯೆ ಗುಂಡಿ ಬಿದ್ದು ಸಮಸ್ಯೆಯಾಗಿತ್ತು. ಸಂಬಂಧಿಸಿದ ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ಸ್ಪಂದಿಸದೆ ಅಲ್ಲಿ ಜಲ್ಲಿ ಸುರಿದು ಗುಂಡಿ ಮುಚ್ಚಿದರೂ ವಾಹನ ಚಲಿಸಿದಾಗ ಮತ್ತೆ ಗುಂಡಿ ಬಿದ್ದಿದೆ. ಮತ್ತೆ ಅಲ್ಲಿ ಜಲ್ಲಿ ಸುರಿದು ಗುಂಡಿ ಮುಚ್ಚಲು ಮುಂದಾದಾಗ ಸ್ಥಳೀಯ ಗ್ರಾಮಸ್ಥರು ವಾಹನವನ್ನು ತಡೆದು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಗ್ರಾಮಸ್ಥರಾದ ಧನರಾಜ್, ಚಿಣ್ಣಪ್ಪ, ಮಂಜುನಾಥ್, ರವಿಕುಮಾರ್, ದಿನೇಶ್, ಅರುಣ, ಕಿರಣ್ ಸೇರಿದಂತೆ ಇತರರು ಇದ್ದರು.