ಮಡಿಕೇರಿ, ಡಿ. 28: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ಅವಧಿಯ ಸಾಧನೆಗಳನ್ನು ಮತ್ತು ಕೊಡಗು ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನತೆಯ ಮುಂದಿಡುವದರೊಂದಿಗೆ ಜನವರಿ 9 ರಂದು ಏರ್ಪಡಿಸಲಾಗುವ ಸಾಧನಾ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ಸಚಿವರು ಪಾಲ್ಗೊಳ್ಳುವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ತಿಳಿಸಿದ್ದಾರೆ.ಈ ಸಂಬಂಧ ಇಂದು ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಜಿಲ್ಲಾ ಆಡಳಿತದೊಂದಿಗೆ ಪ್ರತ್ಯೇಕ ಪೂರ್ವಸಿದ್ಧತಾ ಸಭೆಗಳನ್ನು ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಅಂದು ಅಧಿಕ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಮಾವೇಶ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನ ಅಥವಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಇಂಗಿತ ಹೊರಗೆಡವಿದರು. ಮುಖ್ಯ ಮಂತ್ರಿಗಳೊಂದಿಗೆ ಲೋಕೋಪ ಯೋಗಿ ಸಚಿವ
(ಮೊದಲ ಪುಟದಿಂದ) ಮಹದೇವಪ್ಪ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಮಾಜಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ತಾವು ಭಾಗವಹಿಸುವದಾಗಿ ತಿಳಿಸಿದರಲ್ಲದೆ, ಕಳೆದ 4 ವರ್ಷ 8 ತಿಂಗಳ ಕಾಂಗ್ರೆಸ್ ಸರಕಾರದ ಸಾಧನೆಗಳು ಹಾಗೂ ಈ ಹಿಂದಿನ ಬಿಜೆಪಿ ಮತ್ತು ದಳ ಸರಕಾರಗಳ ಅಭಿವೃದ್ಧಿ ಬಗ್ಗೆ ಜನತೆಯೆದುರು ತುಲನೆ ಮಾಡುವದಾಗಿ ಘೋಷಿಸಿದರು.
ಅಲ್ಲದೆ ಮುಖ್ಯಮಂತ್ರಿಗಳು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಇತರ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಿದ್ದು, ಏನೇನು ಕೆಲಸಗಳು ಎಂದು ಜ. 9 ರಂದು ಸಿದ್ದರಾಮಯ್ಯ ಅವರೇ ಪ್ರಕಟಿಸುವದಾಗಿಯೂ ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿ, ರಸ್ತೆ, ಸೇತುವೆ, ಮಡಿಕೇರಿಯ ಖಾಸಗಿ ಬಸ್ ನಿಲ್ದಾಣ, ಪಾಡಿ ಇಗ್ಗುತ್ತಪ್ಪ ದೇವಾಲಯ ಮಾರ್ಗದ ಕಾಮಗಾರಿ ಸಹಿತ ಈವರೆಗಿನ ಅಭಿವೃದ್ಧಿಯ ಪಟ್ಟಿಯನ್ನು ಮುಖ್ಯಮಂತ್ರಿಗಳೇ ಬಿಡುಗಡೆ ಮಾಡಲಿರುವದಾಗಿ ಸಚಿವ ಸೀತಾರಾಂ ವಿವರಿಸಿದರು.
ಗೋಷ್ಠಿಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಹಾಜರಿದ್ದರು.