ಮಡಿಕೇರಿ, ಡಿ. 28: ಬಡತನವೂ ಸೇರಿದಂತೆ ಪ್ರತಿಯೊಬ್ಬರು ತಮ್ಮೊಳಗಿನ ಹಿಂಜರಿಕೆಯನ್ನು ಮೆಟ್ಟಿನಿಂತರೆ ಜಗತ್ತಿನ ಯಾವದೇ ಕ್ಷೇತ್ರದಲ್ಲಿ ಗೆಲುವಿಗೆ ನಮ್ಮಿಂದಲೇ ಮುನ್ನುಡಿ ಬರೆಯುವದು ಸಾಧ್ಯವೆಂದು ಅಂತರ್ರಾಷ್ಟ್ರೀಯ ಕ್ರೀಡಾಪಟು ತೀತಮಾಡ ಅರ್ಜುನ್ ದೇವಯ್ಯ ಅಭಿಪ್ರಾಯಪಟ್ಟರು.2017ನೇ ಕೊಡಗು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ತಾನು ದೈಹಿಕ ಮತ್ತು ಮಾನಸಿಕ ಕ್ಷಮತೆಯಿಂದ ಕ್ರೀಡಾ ಸಾಧನೆಯ ದಾಖಲೆ ಬರೆದು ದ್ದಾಗಿ ಅನುಭವವನ್ನು ಹಂಚಿಕೊಂಡರು.

ತನ್ನ 23ನೇ ವಯಸ್ಸಿನಲ್ಲಿ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿ ಕೊಂಡು, ಎಂತಹ ಪರಿಸ್ಥಿತಿ ಯಲ್ಲಿಯೂ ಎದೆಗುಂದದೆ ಸ್ಫೂರ್ತಿ ಯನ್ನು ಉಳಿಸಿಕೊಂಡಿದ್ದರಿಂದ ಪಾಕಿಸ್ತಾನದಂತಹ ರಾಷ್ಟ್ರದಲ್ಲಿ ಭಾರತದ ತ್ರಿವರ್ಣಧ್ವಜವನ್ನು ಎತ್ತರಕ್ಕೆ ಹಾರಿಸುವ ಮೂಲಕ 200 ಮೀ. ಓಟದಲ್ಲಿ ಚಿನ್ನದ ಪದಕ ಗಳಿಸಿದ ಕ್ಷಣವನ್ನು ಬದುಕಿನಲ್ಲಿ ಮರೆಯಲು ಸಾಧ್ಯವಿಲ್ಲವೆಂದು ಅವರು ಸ್ಮರಿಸಿದರು.

ದೇಶದ ಸೈನಿಕರು ಗಡಿಕಾಯುತ್ತಾ, ಸಮಾಜವನ್ನು ಪೊಲೀಸರು ರಕ್ಷಿಸುತ್ತಿರುವ ನೆಲೆಯಲ್ಲಿ ಉಳಿದ ವರೆಲ್ಲರು ನೆಮ್ಮದಿಯ ಜೀವನ ದೊಂದಿಗೆ ಸುಖ ನಿದ್ದೆ ಸಾಧ್ಯವಾಗಿದೆ ಎಂದ ಅವರು, ಪೊಲೀಸರು ತಮ್ಮನ್ನು ಸಾಮಾನ್ಯರೆಂದು ತಿಳಿಯದೆ ಸಮಾಜ ರಕ್ಷಣೆಯ ಹೊಣೆ ಹೊತ್ತಿರುವ ಅಧಿಕಾರಿಯೆಂಬ ಹೆಮ್ಮೆ ಸದಾ ಇರಲೆಂದು ಆಶಿಸಿದರು. ಅಂತಹ

(ಮೊದಲ ಪುಟದಿಂದ) ಮಾನಸಿಕತೆಗೆ ಪ್ರತಿಯೊಬ್ಬರಿಗೆ ಕ್ರೀಡಾ ಸ್ಫೂರ್ತಿ ಶ್ರೀರಕ್ಷೆಯೆಂದು ಅರ್ಜುನ್ ತಮ್ಮ ಬದುಕನ್ನು ಉದಾಹರಿಸಿದರು.

ಜಿಲ್ಲಾಧಿಕಾರಿ ಆಶಯ: ಪೊಲೀಸ್ ಇಲಾಖೆಯ ಕಾರ್ಯದಕ್ಷತೆಯಿಂದ ಸಮಾಜದಲ್ಲಿ ಎಲ್ಲರು ನೆಮ್ಮದಿಯಿಂದ ಬಾಳುವದು ಸಾಧ್ಯವಾಗಿದೆ ಎಂದ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು, ಸದಾ ಒತ್ತಡದೊಂದಿಗೆ ಕೆಲಸ ನಿರ್ವಹಿಸುವ ಪೊಲೀಸ್ ಇಲಾಖೆ ಸಹಿತ ಇತರ ಇಲಾಖೆಗಳಿಗೂ ವಾರ್ಷಿಕ ಕ್ರೀಡಾ ಕೂಟಗಳು ಹೊಸಸ್ಫೂರ್ತಿ ನೀಡಲಿದೆ ಎಂದು ನೆನಪಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಅವರು ಪೊಲೀಸ್ ಇಲಾಖೆ ಕ್ರೀಡಾ ಸ್ಫೂರ್ತಿಯೊಂದಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಪ್ರಸಕ್ತ ಕ್ರೀಡಾ ಕೂಟದಿಂದ ಲವಲವಿಕೆಯಿಂದ ಮುಂದೆ ಕಾರ್ಯನಿರ್ವಹಣೆಗೆ ಸಾಧ್ಯವಾಗಲಿದೆ ಎಂದು ಪ್ರಾಸ್ತಾವಿಕ ನುಡಿಯಾಡಿದರು.

ಇಂದಿನಿಂದ ಮೂರು ದಿನಗಳ ತನಕ ನಡೆಯಲಿರುವ ಕ್ರೀಡಾಕೂಟವನ್ನು ಅತಿಥಿ ಗಣ್ಯರು ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಉದ್ಘಾಟಿಸಿದರು. ನಿವೃತ್ತ ಸೈನ್ಯಾಧಿಕಾರಿ ಕೆ.ಎಸ್. ಉತ್ತಯ್ಯ, ಪೊಲೀಸ್ ಅಧಿಕಾರಿಗಳಾಗಿದ್ದ ಕೇಶವಾನಂದ, ಪೂಣಚ್ಚ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ವೃತ್ತ ನಿರೀಕ್ಷಕರು, ಠಾಣಾಧಿಕಾರಿಗಳು ಉಪಸ್ಥಿತರಿದ್ದರು.

ಪೊಲೀಸ್ ಇಲಾಖೆಯ ಆಕರ್ಷಕ ವಾದ್ಯಗೋಷ್ಠಿಯೊಂದಿಗೆ ಆರು ತಂಡಗಳ ಪಥಸಂಚಲನ ಮೂಲಕ ಗಣ್ಯರಿಗೆ ಧ್ವಜವಂದನೆ ಸಲ್ಲಿಸಲಾಯಿತು. ಕ್ರೀಡಾ ಜ್ಯೋತಿ ಉದ್ಘಾಟಿಸಿ ಪೈಪೋಟಿಗೆ ಚಾಲನೆ ನೀಡಲಾಯಿತು. ಪೊಲೀಸ್ ಇಲಾಖೆಯ ಕೆ.ಎಸ್. ಸುಂದರಾಜ್ ವಂದಿಸಿದರು.