ಮಡಿಕೇರಿ, ಡಿ.28 : ಮಡಿಕೇರಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ತಾ. 30ರಂದು ಕೊಡಗಿನ ಗಡಿಭಾಗ ಕರಿಕೆಯಲ್ಲಿ ನಡೆಯಲಿದ್ದು, ಎಲ್ಲಾ ರೀತಿಯ ಸಿದ್ಧತೆ ಸಮರೋಪಾ ದಿಯಲ್ಲಿ ನಡೆಯುತ್ತಿದೆ.ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರನ್ನು ಆಯ್ಕೆ ಮಾಡಲಾಗಿದ್ದು, ಗುರುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಅವರ ಮನೆಗೆ ತೆರಳಿ ಅಧಿಕೃತ ಆಹ್ವಾನ ನೀಡಿದ್ದಾರೆ.ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿ ದಂತೆ ಗುರುವಾರ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ಕುಡೆಕಲ್ ಸಂತೋಷ್, ತಾ. 30ರ ಬೆಳಿಗ್ಗೆ 8 ಗಂಟೆಯಿಂದ ರಾತ್ರಿವರೆಗೆ ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಅಂದು ಪೂರ್ವಾಹ್ನ 8 ಗಂಟೆಗೆ ಭಾಗಮಂಡಲ ಆರಕ್ಷಕ ಠಾಣೆ ಉಪ ಪೊಲೀಸ್ 'ನಿರೀಕ್ಷಕ ಸದಾಶಿವಯ್ಯ ಅವರು ರಾಷ್ಟ್ರ ಧ್ವಜಾರೋಹಣ ಹಾಗೂ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅವರು ನಾಡ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು,

(ಮೊದಲ ಪುಟದಿಂದ) ಬಳಿಕ ನಾಡಿನ ಹಿರಿಯ ಸಾಧಕರ ಹೆಸರಿನಲ್ಲಿ ನಿರ್ಮಿಸಲಾಗಿರುವ ಪದ್ಮನಾಭ ಸರಳಾಯ ದ್ವಾರ, ಕಾಟೂರು ನಾರಾಯಣ ನಂಬಿಯಾರ್ ದ್ವಾರ, ಡಾ|| ಬೇಕಲ್ ಸೋಮನಾಥ್ ದ್ವಾರಗಳನ್ನು ಗಣ್ಯರು ಉದ್ಘಾಟಿಸಲಿದ್ದಾರೆ. 9 ಗಂಟೆಗೆ ಎಳ್ಳುಕೊಚ್ಚಿಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಇದಕ್ಕೆ ತಾಲೂಕು ತಹಶೀಲ್ದಾರ್ ಕುಸುಮ ಚಾಲನೆ ನೀಡಲಿದ್ದಾರೆ. ವಿವಿಧ ಕಲಾತಂಡಗಳ ಸಹಿತ ಸುಮಾರು 2 ಕಿ.ಮೀ ದೂರದ ಮೆರವಣಿಗೆ ನಡೆಯಲಿದ್ದು, ಬಳಿಕ ಕೋಡಿ ರಾಘವಯ್ಯ ಪುಸ್ತಕ ಮಳಿಗೆಯನ್ನು ತಾ.ಪಂ. ಸದಸ್ಯೆ ಸಂಧ್ಯಾ ಉದ್ಘಾಟಿಸಿದರೆ, ಜಿ.ಟಿ.ನಾರಾಯಣ ರಾವ್ ಸಭಾಂಗಣವನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಕವಿತಾ ಪ್ರಭಾಕರ್, ಪಂಜೆ ಮಂಗೇಶರಾಯ ವೇದಿಕೆಯನ್ನು ಕರಿಕೆ ಗ್ರಾ.ಪಂ. ಅಧ್ಯಕ್ಷ ಎನ್.ಬಾಲಚಂದ್ರ ನಾಯರ್ ಉದ್ಘಾಟಿಸಲಿದ್ದಾರೆ.

ಪೂರ್ವಾಹ್ನ 11 ಗಂಟೆಗೆ ಶಾಸಕ ಕೆ.ಜಿ.ಬೋಪಯ್ಯ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬಿ.ಎ.ಷಂಶುದ್ದೀನ್ ನಿಕಟಪೂರ್ವ ಅಧ್ಯಕ್ಷರ ನುಡಿಯಾಡಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಹಂಪಿ ಕನ್ನಡ ವಿವಿಯ ಪೊ. ಎ.ವಿ.ನಾವಡ ಅವರು ಆಗಮಿಸಲಿದ್ದು, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ವಿಚಾರಗೋಷ್ಠಿ: ಮಧ್ಯಾಹ್ನ ಸಹ ಪ್ರಾಧ್ಯಾಪಕಿ ಡಾ|| ಕೋರನ ಸರಸ್ವತಿ ಅವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದ್ದು, ಕನ್ನಡ ಸಾಹಿತ್ಯದ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವ ಎಂಬ ವಿಷಯದ ಕುರಿತು ಪತ್ರಕರ್ತ ಕೆ.ಬಿ. ಮಂಜುನಾಥ್, ಕನ್ನಡಕ್ಕೆ ಅನ್ಯ ಭಾಷೆ ಕೊಡುಗೆ ಎಂಬ ವಿಷಯದ ಕುರಿತು ಉಪನ್ಯಾಸಕ ಪಟ್ಟಡ ಶಿವಕುಮಾರ್, ಗಡಿಭಾಗದಲ್ಲಿ ಕನ್ನಡ ಭಾಷೆ ಎದುರಿಸುತ್ತಿರುವ ಸವಾಲುಗಳು ಎಂಬ ವಿಷಯದ ಕುರಿತು ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರುಗಳು ವಿಷಯ ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಕಡ್ಲೇರ ತುಳಸಿ ಮೋಹನ್, ರಂಜಿತಾ, ಇಂದಿರಾ, ಹೇಮಂತ್ ಎಂ.ಎನ್, ಚೊಕ್ಕಾಡಿ ಪ್ರೇಮಾ ರಾಘವಯ್ಯ, ಆನಂದಿ ಪಿ.ಎಸ್ ಅವರುಗಳಿಂದ ಕನ್ನಡ ಗೀತಾ ಗಾಯನ ಕಾರ್ಯಕ್ರಮ ಜರುಗಲಿದೆ.

ಕವಿಗೋಷ್ಠಿ : ಬಳಿಕ ಮೈಸೂರು ಶೇಷಾದ್ರಿಪುರಂ ಪದವಿ ಕಾಲೇಜು ಉಪನ್ಯಾಸಕಿ, ಕವಯತ್ರಿ ಡಾ. ಸಿ.ಪಿ.ಲಾವಣ್ಯ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ವಿಶೇಷವಾಗಿ ಉದಯೋನ್ಮುಖ ಕವಿಗಳು ಇದರಲ್ಲಿ ಕವನ ವಾಚಿಸಲಿದ್ದಾರೆ. ಅಪರಾಹ್ನ 3.30ಕ್ಕೆ ನಡೆಯುವ ಬಹಿರಂಗ ಅಧಿವೇಶದನದಲ್ಲಿ 9ನೇ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪ್ರಮುಖವಾದ 9 ನಿರ್ಣಯಗಳನ್ನು ಅಂಗೀಕರಿಸಲಾಗುವದು.

ಭಾಗವಹಿಸುವವರು : ಕಿಶೋರ್ ರೈ ಕತ್ತಲೆಕಾಡು, ವಿ.ಜೆ. ಮೌನ (ಮಡಿಕೇರಿ), ಕಡ್ಲೇರ ಜಯಲಕ್ಷ್ಮಿ ಮೋಹನ್ (ಬೆಟ್ಟಗೇರಿ), ರಾಘವೇಂದ್ರ ಸುರೇಶ್ (ಮಡಿಕೇರಿ), ಶಶಿಕಿರಣ್ ಎಸ್.ಆರ್. (ಮಡಿಕೇರಿ), ಆರ್. ಜಯನಾಯಕ್ (ಮದೆ), ಶೈಲಜ ದಿನೇಶ್ (ಕಾನೂರು), ರಾಘವೇಂದ್ರ ಭಾಗಮಂಡಲ, ಪ್ರಶಾಂತ್ ಸಿ. ನಾಯಕ್ (ಕರಿಕೆ), ಕಾವ್ಯ ಎ.ಎಸ್. (ಭಾಗಮಂಡಲ), ದರ್ಶನ್ ಎಂ.ವಿ. (ಮಡಿಕೇರಿ).

ಕನ್ನಡ ಗೀತಾಗಾಯನ : ಗಾಯಕರು ಕಡ್ಲೇರ ತುಳಸಿ ಮೋಹನ್, ರಂಜಿತ, ಇಂದಿರಾ, ಹೇಮಂತ್ ಎಂ.ಎನ್., ಚೊಕ್ಕಾಡಿ ಪ್ರೇಮರಾಘವಯ್ಯ, ಆನಂದಿ ಪಿ.ಎಸ್., ಕಾಟೂರು ಶಾಲಾ ತಂಡ ಕೊಳಲು ವಾದನ ಮಾಡಲಿದ್ದಾರೆ.

ಸಮಾರೋಪ : ಸಂಜೆ 4ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಗುವದು. ಸಂಜೆ 6 ಗಂಟೆಯ ಬಳಿಕ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.

ಸನ್ಮಾನಿತರು: ಕೆ.ಆರ್. ವಿದ್ಯಾಧರ್ (ಸಾಹಿತ್ಯ), ಲಕ್ಷ್ಮಣ ಸಿಂಗ್(ಕ್ರೀಡೆ), ಕುದುಕುಳಿ ಭರತ್ (ಸಮಾಜಸೇವೆ), ಕುಯ್ಯಮುಡಿ ಸುನಿಲ್ (ಮಾಧ್ಯಮ), ಚೌರೀರ ಉದಯ (ಶಿಕ್ಷಣ), ತೆನೆಗುಂಡು ಚಾಣೆ (ಜನಪದ), ಪರಿಚನ ಲಕ್ಷ್ಮಣ (ನಾಟಿ ವೈದ್ಯ), ಪ್ರೇಮಾ ಆಚಾರ್ (ಕೃಷಿ), ಭಾರತೀ ರಮೇಶ್ (ನೃತ್ಯ), ಮಣಿ (ವಾದ್ಯಸಂಗೀತ), ಬಲ್ಯಮೀದೇರಿರ ಸುಬ್ರಮಣಿ (ರಂಗಭೂಮಿ), ಕೋಡಿ ಭರತ್ (ಕಲೆ), ಹಿಮಾ ಜಾರ್ಜ್ ಕರಿಕೆ (ಯುವ ಪ್ರತಿಭೆ) ಅವರನ್ನು ಸನ್ಮಾನಿಸಲಾಗುವದು.

ಬಸ್ ವ್ಯವಸ್ಥೆ : ವಿಶೇಷವಾಗಿ ಕೊಡಗಿನ ಗಡಿಭಾಗವಾಗಿ, ಕೇರಳಕ್ಕೆ ಹೊಂದಿಕೊಂಡಂತಿರುವ ಮತ್ತು ಕೇರಳದ ಮಲೆಯಾಳಿ ಭಾಷಿಗರೇ ಅಧಿಕವಿರುವ ಕರಿಕೆಯಲ್ಲಿ ಈ ಬಾರಿಯ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ದೂರದ ಈ ಪ್ರದೇಶದಲ್ಲಿ ನಡೆಯುವ ಸಮ್ಮೇಳನಕ್ಕೆ ತೆರಳುವ ಸಾಹಿತ್ಯಾಸಕ್ತರ ಅನುಕೂಲಕ್ಕಾಗಿ ಮಡಿಕೇರಿಯಿಂದ ಬೆಳಿಗ್ಗೆ 8 ಹಾಗೂ ಪೂರ್ವಾಹ್ನ 11 ಗಂಟೆಗೆ ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಕರಿಕೆಯಿಂದ ವಾಪಾಸಾಗುವವರಿಗೂ ಸಂಜೆ ಹಾಗೂ ರಾತ್ರಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಸಂತೋಷ್ ವಿವರಣೆ ನೀಡಿದರು.

ಗೋಷ್ಠಿಯಲ್ಲಿ ಹಾಜರಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಜಿಲ್ಲೆಯ ಗಡಿಭಾಗವಾದ ಪುಟ್ಟ ಗ್ರಾಮವಾದ ಕರಿಕೆಯಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸುವಂತೆ ಗ್ರಾಮಸ್ಥರ ಕೋರಿಕೆ ಮೇರೆಗೆ ಹಾಗೂ ಪರಿಷತ್ತಿನ ಹಂಬಲದೊಂದಿಗೆ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಮಲೆಯಾಳಿ ಭಾಷಿಗರೇ ಅಧಿಕವಿದ್ದರೂ, ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಪ್ರತಿಯೊಬ್ಬರೂ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ.ಎಸ್. ರಮೇಶ್, ತಾಲೂಕು ಕಸಾಪ ಕಾರ್ಯದರ್ಶಿ ಕೂಡಕಂಡಿ ದಯಾನಂದ, ಕೋಶಾಧ್ಯಕ್ಷ ಬಾಳೆಕಜೆ ಯೋಗೇಂದ್ರ ಹಾಗೂ ನಿರ್ದೇಶಕಿ ಕೇಕಡ ಇಂದುಮತಿ ಉಪಸ್ಥಿತರಿದ್ದರು.