ಸೋಮವಾರಪೇಟೆ, ಡಿ. 27: ತಾಲೂಕು ಯುವ ಒಕ್ಕೂಟದ ವತಿಯಿಂದ ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸ ಲಾಗಿದ್ದ ತಾಲೂಕು ಮಟ್ಟದ ಕ್ರೀಡೋತ್ಸವದಲ್ಲಿ ಸಿದ್ಧಲಿಂಗಪುರ ಹಾಗೂ ನಂಜರಾಯಪಟ್ಟಣದ ತಂಡಗಳು ಪ್ರಶಸ್ತಿ ಗಳಿಸಿದವು.
ಪುರುಷರ ವಿಭಾಗದ ವಾಲಿ ಬಾಲ್ ಪಂದ್ಯಾಟದಲ್ಲಿ ಸಿದ್ಧಲಿಂಗಪುರ ತಂಡವು ಚಕ್ರವರ್ತಿ ಟ್ರಾವೆಲ್ಸ್ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದ ಥ್ರೋಬಾಲ್ ಸ್ಪರ್ಧೆಯಲ್ಲಿ ನಂಜರಾಯಪಟ್ಟಣದ ಕೂರ್ಗ್ ಗಲ್ರ್ಸ್ ಪ್ರಥಮ, ಶುಂಠಿ ಗ್ರಾಮದ ಪೂಜಾ ಯುವತಿ ಮಂಡಳಿ ದ್ವಿತೀಯ ಸ್ಥಾನ ಪಡೆಯಿತು. ಪುರುಷರ ವಿಭಾಗದ ಹಗ್ಗಜಗ್ಗಾಟದಲ್ಲಿ ಚಕ್ರವರ್ತಿ ಟ್ರಾವೆಲ್ಸ್ ಪ್ರಥಮ, ಹಾನಗಲ್ ಶೆಟ್ಟಳ್ಳಿಯ ಸರೋವರ ಯುವಕ ಸಂಘ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಹಾನಗಲ್ಶೆಟ್ಟಳ್ಳಿಯ ಸರಸ್ವತಿ ಯುವತಿ ಮಂಡಳಿ ಪ್ರಥಮ, ಹಿಂದೂ ಮಲೆಯಾಳಿ ಸಮಾಜ ದ್ವಿತೀಯ, ರಸ್ತೆ ಓಟ ಸ್ಪರ್ಧೆಯಲ್ಲಿ ಸ್ವಾಗತ್ ಪ್ರಥಮ, ನಿಖಿಲ್ ದ್ವಿತೀಯ ಸ್ಥಾನ ಪಡೆದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕ್ರೀಡಾಕೂಟಗಳಿಂದ ಪರಸ್ಪರ ಬಾಂಧವ್ಯ ವೃದ್ಧಿಸುತ್ತದೆ. ಯುವ ಸಮುದಾಯ ಕ್ರೀಡೆಯತ್ತ ಹೆಚ್ಚಿನ ಆಸಕ್ತಿ ಮೂಡಿಸಲು ಸಹಕಾರಿಯಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಶೋಭರಾಜ್ ವಹಿಸಿದ್ದರು. ಯುವ ಒಕ್ಕೂಟದ ಸ್ಥಾಪಕಾಧ್ಯಕ್ಷ ಕೆ.ಸಿ. ಉದಯ ಕುಮಾರ್, ಜಿಲ್ಲಾಧ್ಯಕ್ಷ ಎಂ.ಡಿ. ಹರೀಶ್, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಮಾಜಿ ಅಧ್ಯಕ್ಷ ಯಡೂರು ರವಿ, ಕಾರ್ಯದರ್ಶಿ ಕೆ.ಆರ್. ಚಂದ್ರಿಕಾ ಸೇರಿದಂತೆ ಇತರರು ಉಪಸ್ಥಿತರಿದ್ದರು.