ವೀರಾಜಪೇಟೆ, ಡಿ. 27: ಇಲ್ಲಿನ ಕೆ. ಬೋಯಿಕೇರಿಯ ನಿವಾಸಿ ಹಾಗೂ ಖಾಸಗಿ ಸಹಾಯಕ ಇಂಜಿನಿಯರ್ ವೆಂಕಟೇಶ್ (32) ತಾ. 24 ರಂದು ಸಂಜೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ನಿನ್ನೆ ದಿನ ಅಪರಾಹ್ನ ಪತ್ತೆಯಾಗಿದೆ.
ಮೃತ ವೆಂಕಟೇಶ್ ಪತ್ನಿಯನ್ನು ಶನಿವಾರ ದಿನ ಮಗುವಿನೊಂದಿಗೆ ತವರು ಮನೆ ಸೋಮವಾರಪೇಟೆಗೆ ಹೋಗುವಂತೆ ಹೇಳಿaದ ನಂತರ ಬೆಂಗಳೂರಿನಿಂದ ಭಾನುವಾರ ಮನೆಗೆ ಬಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮಾವರ ಬೆಳಿಗ್ಗೆ ಬಾಗಿಲು ತೆಗೆಯದ್ದನ್ನು ನೋಡಿದ ನೆರೆಕರೆಯವರು ಪತ್ನಿಯ ತವರಿಗೆ ಫೋನ್ ಮಾಡಿದ್ದಾರೆ. ಪತ್ನಿ ಬಂದು ಬಾಗಿಲು ತೆಗೆದು ನೋಡಿದಾಗ ವೆಂಕಟೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವದು ಕಂಡುಬಂದಿದೆ. ಪತ್ನಿ ಮಾನಸ ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೃತ ವೆಂಕಟೇಶ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ 3 ತಿಂಗಳುಗಳಿಂದ ಉದ್ಯೋಗದಲ್ಲಿದ್ದು, ಈ ಹಿಂದೆಯೂ ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಹಂಗಾಮಿ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸಿದ ನಂತರ ಖಾಸಗಿ ಕಂಪೆನಿಗೆ ಸೇರಿದ್ದರು.