ಹರೀಶ್ ಬೋಪಣ್ಣ ಸಿದ್ದಾಪುರ, ಡಿ. 27: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುಗದ್ದೆ ಗುಹ್ಯ ರಸ್ತೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೋಪಣ್ಣ ಅವರು ಭೂಮಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರವು ಕೊಡಗು ಜಿಲ್ಲೆಯ ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಅನುದಾನಗಳನ್ನು ನೀಡಿದ್ದು ಮುಂಬರುವ ದಿನಗಳಲ್ಲಿ ಜಿಲ್ಲೆಯ ಕುಗ್ರಾಮaಗಳ ರಸ್ತೆ ಅಭಿವೃದ್ಧಿಗೆ ಅನುದಾನವನ್ನು ಉಸ್ತುವಾರಿ ಸಚಿವರ ಮೂಲಕ ಬಿಡುಗಡೆ ಮಾಡಲು ಪ್ರಯತ್ನಿಸಲಾಗುವದೆಂದರು. ಇದಲ್ಲದೇ ಮುಖ್ಯಮಂತ್ರಿಯ ವಿಶೇಷ ಅನುದಾನದಲ್ಲಿ ಜಿಲ್ಲಾದ್ಯಂತ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದಲ್ಲದೆ ಮಲೆನಾಡು ಅಭಿವೃದ್ಧಿ ಯೋಜನೆ ಯಡಿಯಲ್ಲೂ ಅನುದಾನಗಳು ಬಿಡುಗಡೆಯಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು. ಮುಂಬರುವ ದಿನಗಳಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಲಾಗುವದು ಎಂದ ಅವರು ಸಿದ್ದಾಪುರ ಬಸ್ ನಿಲ್ದಾಣ ಹಾಗೂ ಸಂತೆ ಮಾರುಕಟ್ಟೆಯ ಅಭಿವೃದ್ಧಿಪಡಿಸಲು ಈಗಾಗಲೇ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆಂದರು.
ಜಿಲ್ಲೆಯಲ್ಲಿ ಬಿ.ಜೆ.ಪಿ.ಯ 2 ಶಾಸಕರುಗಳು ಕಳೆದ 15 ವರ್ಷ ಗಳಿಂದಲೂ ಶಾಸಕರಾಗಿದ್ದರೂ ಕೂಡ ಜಿಲ್ಲೆಯ ರಸ್ತೆಗಳು ಹದಗೆಟ್ಟಿವೆ. ಈ ಬಗ್ಗೆ ಆಸಕ್ತಿ ವಹಿಸದೆ ರಾಜಕೀಯದಲ್ಲಿ ಕಾಲಹರಣ ಮಾಡುತ್ತಿದ್ದಾರೆಂದು ಆರೋಪಿಸಿದರು.
ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಪಿ.ಸಿ. ಹಸೈನಾರ್ ಹಾಜಿ ಮಾತನಾಡಿ, ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಅನುದಾನದಿಂದ ಕೈಗೊಳ್ಳುತ್ತಿರುವ ಕಾಮಗಾರಿಗಳನ್ನು ಮುಕ್ತಾಯಗೊಂಡ ಬಳಿಕ ಬಿ.ಜೆ.ಪಿ.ಯ ಶಾಸಕರುಗಳು ತರಾತುರಿಯಲ್ಲಿ ಉದ್ಘಾಟಿಸುತ್ತಿರುವದು ಖಂಡನೀಯ ಎಂದರು. ಜಿಲ್ಲೆಯ ಶಾಸಕರುಗಳು ಅಭಿವೃದ್ಧಿ ಬಗ್ಗೆ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಆರೋಪಿಸಿದರು.
ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಆರ್.ಕೆ. ಸಲಾಂ ಮಾತನಾಡಿ, ರಾಜ್ಯದಲ್ಲಿ ಕಳೆದ ನಾಲ್ಕೂವರೆ ವರ್ಷಗಳಿಂದ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಹೆಚ್ಚಿನ ಅನುದಾನವನ್ನು ನೀಡುತ್ತಿರುವದು ಸಂತಸ ತಂದಿದೆ ಎಂದರು. ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. 25 ಲಕ್ಷಕ್ಕೂ ಅಧಿಕ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಕೆ. ಉಸ್ಮಾನ್ ಹಾಜಿ, ಬ್ಲಾಕ್ ಉಪಾಧ್ಯಕ್ಷ ಹನೀಫ, ಎಂ.ಎಸ್. ವೆಂಕಟೇಶ್, ಗೋಪಾಲ ಕೃಷ್ಣ, ಗ್ರಾ.ಪಂ. ಅಧ್ಯಕ್ಷ ಮಣಿ, ಗ್ರಾ.ಪಂ. ಸದಸ್ಯರುಗಳಾದ ರೆಜಿತ್ ಕುಮಾರ್, ದೇವಜಾನು, ಶಿವಕುಮಾರ್, ಸವಿತಾ, ಸುಕುರು, ಅಬ್ದುಲ್ ಖಾದರ್, ವಲಯ ಅಧ್ಯಕ್ಷ ವಿ.ಕೆ. ಬಷೀರ್ ಇತರರು ಹಾಜರಿದ್ದರು. ರೆಜಿತ್ ಕುಮಾರ್ ಸ್ವಾಗತಿಸಿ, ವಂದಿಸಿದರು.