ಗೋಣಿಕೊಪ್ಪಲು, ಡಿ.25: ಆಡಳಿತಾರೂಢ ಸರ್ಕಾರ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿ ಬಗ್ಗೆ ಗೋಣಿಕೊಪ್ಪಲಿನಲ್ಲಿ ಭಾನುವಾರ ಸಂಜೆ ವೀರಾಜಪೇಟೆ ತಾಲೂಕು ಯುವಮೋರ್ಚಾ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಹಿಂದೂಗಳು ಧಿಕ್ಕಾರ ಕೂಗುತ್ತಾ ಪಂಜಿನ ಮೆರವಣಿಗೆ ನಡೆಸಿದರು.
ಗೋಣಿಕೊಪ್ಪಲು ಎಪಿಎಂಸಿ ಆವರಣದಿಂದ ಸಂಜೆ 7 ಗಂಟೆಗೆ ಸುಮಾರು ನೂರಾರು ಯುವಕರು ದೊಂದಿಯೊಂದಿಗೆ ಇಲ್ಲಿನ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿದರಲ್ಲದೆ, ಬಳಿಕ ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರವನ್ನು ಖಂಡಿಸಿ ಬಸ್ ನಿಲ್ದಾಣದ ಮುಂಭಾಗ ಬೆಂಕಿ ಹಚ್ಚಿ ಭೂತದಹನ ಮಾಡಿದರು.
ಇಲ್ಲಿನ ಬಸ್ ನಿಲ್ದಾಣದಲ್ಲಿ ಬಳಿಕ ಹಿಂದೂಪರ ಸಂಘಟನೆಯ ಪ್ರಮುಖರನ್ನುದ್ದೇಶಿಸಿ ಅತಿಥಿಗಳು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.
ಬೋಪಯ್ಯ ಲೇವಡಿ
ರಾಜ್ಯ ಸರ್ಕಾರದ 5 ವರ್ಷದ ಸಾಧನೆಯನ್ನು ಜನತೆಗೆ ತಲುಪಿಸುವ ಯೋಚನೆಯೊಂದಿಗೆ ಬಸವನ ಬಾಗೇವಾಡಿಯಿಂದ ಹೊರಟಿರುವ ಕಾಂಗ್ರೆಸ್‍ನದ್ದು ‘ಸಾಧನಾ ಯಾತ್ರೆ’ಯಲ್ಲ ಅದೊಂದು ಶವಯಾತ್ರೆ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಲೇವಡಿ ಮಾಡಿದರು.
ಕಳೆದ ಐದು ವರ್ಷದ ಅವಧಿಯಲ್ಲಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ 20 ಕ್ಕೂ ಅಧಿಕ ಹಿಂದೂಗಳ ಕಗ್ಗೊಲೆ ಯಾಗಿದೆ. ಈ ಬಗ್ಗೆ ಸಮರ್ಪಕ ತನಿಖೆಯಾಗಲಿ, ಪ್ರಮುಖ ಆರೋಪಿಗಳ ಬಂಧನವಾಗಲಿ ನಡೆದಿಲ್ಲ. ಕೊಲೆ ಆರೋಪಿಗಳಿಗೆ ರಾಜ್ಯ ಸರ್ಕಾರ ಬೆಂಗಾವಲಾಗಿ ನಿಂತಿದೆ ಎಂದು ಆರೋಪಿಸಿದರು.
ಬಿಜೆಪಿ ಆಡಳಿತವಿದ್ದಾಗ ರಾಜ್ಯ ಎಲ್ಲೆಡೆ ಉತ್ತಮ ಅಭಿವೃದ್ಧಿಗೆ ಒತ್ತು ನೀಡಲಾಗಿತ್ತು. ಗ್ರಾಮೀಣ ಭಾಗದ ರಸ್ತೆಗಳೂ ಅಭಿವೃದ್ಧಿಗೊಂಡಿದ್ದವು. ಇದೀಗ ಕೊಡಗಿಗೆ ಮುಖ್ಯಮಂತ್ರಿ ವಿಶೇಷ ಪ್ಯಾಕೇಜ್ ಮೂಲಕ ಕೋಟಿಗಟ್ಟಲೆ ಹಣದ ಲೆಕ್ಕಕ್ಕೆ ಗುದ್ದಲಿಪೂಜೆ ಮಾಡುವದು ಮಾತ್ರ ಕಾಣುತ್ತಿದೆಯೇ ಹೊರತು ಪ್ರಮುಖ ರಸ್ತೆಯ ಹೊಂಡಗಳು ಹಾಗೇಯೇ ಇವೆ. ಅಭಿವೃದ್ಧಿ ನೆಪದಲ್ಲಿ ಕೊಡಗಿಗೆ ಬಂದ ಹಣ ಸದ್ಭಳಕೆಯಾಗುತ್ತಿಲ್ಲ ಎಂದು ಹೇಳಿದರು.
ದಿಕ್ಸೂಚಿ ಭಾಷಣ ಮಾಡಿದ ಮಂಗಳೂರಿನ ಆರ್‍ಎಸ್‍ಎಸ್ ಮುಖಂಡ ಶ್ಯಾಮ್‍ಸುಂದರ್ ಅವರು, ರಾಜ್ಯದಲ್ಲಿ ಸಾಲು ಸಾಲು ಹತ್ಯೆಗಳು ನಡೆಯುತ್ತಿವೆÉ. ಟಿಪ್ಪು ಸುಲ್ತಾನ್ ಆಚರಣೆ ಮೂಲಕ ಕೊಡಗು ಜಿಲ್ಲೆಯ ಸ್ವಾಭಿಮಾನಕ್ಕೆ ಸಿದ್ದರಾಮಯ್ಯ ಅವರು ಧಕ್ಕೆ ತಂದಿದ್ದಾರೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತಹಾ ದೇಶಭಕ್ತರ ದಿನಾಚರಣೆ ಮಾಡುವದು ಬಿಟ್ಟು ಓಟ್ ಬ್ಯಾಂಕ್‍ಗಾಗಿ ಮತಾಂಧ ರಾಜನ ಜಯಂತಿಯನ್ನು ಆಚರಿಸುತ್ತಿರುವದು ನಿಜಕ್ಕೂ ಅಕ್ಷಮ್ಯ ಎಂದರು. ಅಹಿಂದ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದುಳಿದ, ಅಲ್ಪ ಸಂಖ್ಯಾತ ವರ್ಗಗಳ ಹತ್ಯೆಯೂ ನಡೆಯುತ್ತಿದೆ. ಈ ಬಗ್ಗೆ ಕನಿಷ್ಟ ಕಾಳಜಿ ಕಾಣುತ್ತಿಲ್ಲ. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಮತ್ತೆ ಬಂದಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಲಾಗುವದು ಎಂದು ನುಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೀಶ್ ಅವರು ಮಾತನಾಡಿ, ಇದೀಗ ಜನಪರ ಸರ್ಕಾರ ಇಲ್ಲ. ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಗಾಳಿಗೆ ತೂರಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದಲ್ಲಿ, ಮೊಟ್ಟೆ ವಿತರಣೆಯಲ್ಲಿ ಜಾತಿ ತಾರತಮ್ಯವನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ಸಮಾಜವನ್ನು ಜಾತಿಯ ವಿಷ ಬೀಜದಿಂದ ಒಡೆಯುವ ಪ್ರಯತ್ನ ನಡೆದಿದೆ. ಹಿಂದೂಗಳ ಕಗ್ಗೊಲೆಗೆ ರಾಜ್ಯ ಸರ್ಕಾರವೇ ಪ್ರಚೋದನೆ ನೀಡುತ್ತಿದೆ ಎಂದು ಟೀಕಿಸಿದರು.
ತಾಲೂಕು ಯುವ ಮೋರ್ಚಾ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ ಅವರ ನೇತೃತ್ವದಲ್ಲಿ ಜರುಗಿದ ಪಂಜಿನ ಮೆರವಣಿಗೆಯಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಮನು ಮುತ್ತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ, ತಾಲೂಕು ಪ್ರಧಾನ ಕಾರ್ಯದರ್ಶಿ ತೋರಿರ ವಿನು, ಜಿಲ್ಲಾ ಕಾರ್ಯದರ್ಶಿ ಮಾಚಿಮಂಡ ಗಪ್ಪಣ್ಣ, ಪ್ರಮುಖರಾದ ಶಾಂತೇಯಂಡ ರವಿಕುಶಾಲಪ್ಪ, ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅರುಣ್ ಭೀಮಯ್ಯ, ಜಿ.ಪಂ.ಸದಸ್ಯರಾದ ಸಿ.ಕೆ.ಬೋಪಣ್ಣ, ಮೂಕೋಂಡ ವಿಜು ಸುಬ್ರಮಣಿ, ಅಪ್ಪಂಡೇರಂಡ ಭವ್ಯ, ಎಪಿಎಂಸಿ ಅಧ್ಯಕ್ಷ ಮಾಚಿಮಂಡ ಸುವಿನ್‍ಗಣಪತಿ, ಸದಸ್ಯರಾದ ಕಿಲನ್‍ಗಣಪತಿ, ಅಜ್ಜಿಕುಟ್ಟೀರ ಪ್ರವೀಣ್, ಸುಜಾ ಪೂಣಚ್ಚ, ಚಿಯಕ್‍ಪೂವಂಡ ಸುಬ್ರಮಣಿ, ಗಾಂಧಿ ದೇವಯ್ಯ, ಕಬ್ಬಚ್ಚಿರ ಪ್ರಭು, ಕೆ.ಬಿ.ಗಿರೀಶ್ ಗಣಪತಿ, ನೆಲ್ಲೀರ ಚಲನ್, ದರ್ಶನ್, ದಾದೂ ಪೂವಯ್ಯ, ತಾಲ್ಲಕು ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮಿ ಸುಬ್ಬಯ್ಯ, ಮೂಕಳೇರ ಕಾವ್ಯ, ರಾಣಿ ನಾರಾಯಣ ಮುಂತಾದವರು ಉಪಸ್ಥಿತರಿದ್ದರು.
-ಟಿ.ಎಲ್.ಶ್ರೀನಿವಾಸ್