ವೀರಾಜಪೇಟೆ, ಡಿ. 24: ಕೃಷಿ ಅವಲಂಬಿತ ರೈತಾಪಿ ಬಂದುಗಳು ಒಂದೇ ಬೆಳೆಯನ್ನು ಅವಲಂಬಿತರಾಗದೆ ಆರ್ಥಿಕವಾಗಿ ಮುಂದುವರೆಯಲು ಮಿಶ್ರ ಬೆಳೆಗಳನ್ನು ಬೆಳೆಯುವದು ಸಹಕಾರಿಯಾಗುತ್ತದೆ ಎಂದು ನಾಬಾರ್ಡ್ ಸಂಸ್ಥೆಯ ಮಹಾ ಪ್ರಬಂಧಕರಾದ ಮುಂಡಂಡ ಸಿ. ನಾಣಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ತೋಟಗಾರಿಕೆ ಇಲಾಖೆ (ಜಿ.ಪಂ) ಕರ್ನಾಟಕ ಸರ್ಕಾರ, ಅಗ್‍ರೀಚ್ ಗ್ಲೊಬಲ್ ಎಲ್.ಎಲ್.ಪಿ. ಸಂಸ್ಥೆ ಬೆಂಗಳೂರು, ವೀರಾಜಪೇಟೆ ಮತ್ತು ಮಡಿಕೇರಿ ತಾಲೂಕು ಸಾವಯವ ಕೃಷಿ ಸಹಕಾರಿ ನಿಯಮಿತ ಸಂಸ್ಥೆಯ ಸಹಯೋಗದೊಂದಿಗೆ ಪಟ್ಟಣದ ಕೂರ್ಗ್ ಪೆವೆಲಿಯನ್ ಸಭಾಂಗಣದಲ್ಲಿ ಅಯೋಜನೆಗೊಂಡ ರೈತರಿಗೆ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಗಮಿಸಿ ಮಾತನಾಡಿದರು. ರೈತರು ಬೆಳೆದ ಬೆಳೆಗೆ ಇಂದು ಮಾರುಕಟ್ಟೆಯಲ್ಲಿ ನಿಗಧಿತ ದರ ಲಭಿಸದೆ ಕಂಗಾಲಾಗಿದ್ದಾರೆ. ಇದಕ್ಕೆ ಪೂರಕವಾಗಿ ಅತ್ಮಹತ್ಯೆ ಎಂಬ ಘೋರ ಕೃತ್ಯಗಳಿಗೆ ಶರಣಾಗಿದ್ದಾರೆ. ವೈಜ್ಞಾನಿಕ ರೀತಿಯಲ್ಲಿ ಮಿಶ್ರ ಬೆಳೆಗಳನ್ನು ಬೆಳೆದು ಅರ್ಥಿಕವಾಗಿ ಸದೃಢವಾಗುವದನ್ನು ಬೆಳೆಗಾರರು ಮನವರಿಕೆ ಮಾಡುವದು ಉತ್ತಮ. ಬೆಳೆಗಾರ ಮಣ್ಣಿನ ಫಲವತ್ತತೆಯನ್ನು ಗುರುತಿಸಿ ಪರಿಸರದ ಏರಿಳಿತಗಳನ್ನು ಗಮನಿಸಿ ಸಕಾಲದ ಬೆಳೆಗಳನ್ನು ಬೆಳೆದು ಇತರರಿಗೆ ಮಾದರಿಯಾಗಬೇಕು. ಇಲಾಖೆಗಳಿಂದ ಹಲವು ರೀತಿಯ ಸಹಾಯಧನದೊಂದಿಗೆ ಕೃಷಿಗೆ ಸಂಬಂಧಿಸಿದ ನಾನಾ ರೀತಿಯ ಬೆಳೆಗಳು ಬೆಳೆಯಲು ತರಬೇತಿ ನೀಡಲಾಗುತ್ತಿದೆ ರೈತರು ಯೋಜನೆಗಳ ಸದ್ಬಳಕೆ ಮಾಡಿದಲ್ಲಿ ಆರ್ಥಿಕ ಸಂಕಷ್ಟಗಳಿಂದ ಪಾರಾಗಬಹುದು ಎಂದು ಕರೆ ನೀಡಿದರು.

ತೊಟಗಾರಿಕೆ ಇಲಾಖೆಯ ಅಧಿಕಾರಿಗಳಾದ ಚಂದ್ರಶೇಖರ್ ಅವರು ಮಾತನಾಡಿ, ಇಲಾಖೆಯಲ್ಲಿ ರೈತರಿಗಾಗಿ ಸಹಾಯಧನ ಆಧಾರಿತ ಕಾರ್ಯಕ್ರಮಗಳು ಜಾರಿಯಲ್ಲಿರುತ್ತದೆ. ಹೈನುಗಾರಿಕೆ, ತೋಟದ ಬೆಳೆಗಳನ್ನು ಬೆಳೆಯಲು ಹಾಗೂ ಮಿಶ್ರ ತಳಿ ಹೂವಿನ ಪದ್ಧತಿಯಲ್ಲಿ ಬೆಳೆಯುವ ನಾನಾ ರೀತಿಯ ಕಾರ್ಯಕ್ರಮಗಳನ್ನು ಇಲಾಖೆಯಿಂದ ರೈತರಿಗೆ ನೀಡಲಾಗುತ್ತಿದೆ. ಮಿಶ್ರ ಬೆಳೆಗಳನ್ನು ಬೆಳೆಯುವಲ್ಲಿ ಆಸಕ್ತಿ ತೋರಬೇಕು ಅದರೊಂದಿಗೆ ಆರ್ಥಿಕ ಸಂಕಷ್ಟದಿಂದ ಹೊರಬರಲು ಶ್ರಮಿಸಿಬೇಕು ಎಂದರು

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಶಿಕ್ಷಕ ಮತ್ತು ಕಾಫಿ ಬೆಳೆಗಾರರಾದ ಚೌರೀರ ಉದಯ ಅವರು ಮಾತನಾಡಿ ಕೊಡಗಿನಲ್ಲಿ ಕಾಫಿ ಮತ್ತು ಕರಿಮೆಣಸು ಬೆಳೆಗಳು ಮುಖ್ಯವಾದ ಕೃಷಿಯಾಗಿದ್ದು ಗದ್ದೆಗಳು ಹಲವು ಕಾರಣದಿಂದ ಬರಡು ಭೂಮಿಯಾಗಿ ಮಾರ್ಪಟ್ಟಿದೆ ಸಾಂಪ್ರದಾಯಕ ಬೆಳೆಯೊಂದಿಗೆ ಮಿಶ್ರ ಬೆಳೆಗಳ ಕಡೆ ಗಮನಹರಿಸಿದಲ್ಲಿ ರೈತರ ಅರ್ಥಿಕ ಸ್ಥಿತಿಯು ಚೇತರಿಕೆ ಕಾಣುವದು ಎಂದು ಹೇಳಿದರು.

ಸಿಂಡಿಕೇಟ್ ಬ್ಯಾಂಕ್‍ನ ವ್ಯವಸ್ಥಾಪಕರು ಮತ್ತು ಸಹ ವ್ಯವಸ್ಥಾಪಕರುಗಳಾದ ಚೇತನ್ ಮತ್ತು ಸುಮೀತ್ ಅವರು ರೈತರಿಗಾಗಿ ಬ್ಯಾಂಕ್‍ನಿಂದ ದೊರೆಯುವ ಸಾಲಗಳ ಬಗ್ಗೆ ವಿವರಣೆಯನ್ನು ನೀಡಿದರು. ಅಗ್‍ರೀಚ್ ಗ್ಲೋಬಲ್ ಎಲ್.ಎಲ್.ಪಿ. ಸಂಸ್ಥೆಯ ವ್ಯವಸ್ಥಾಪಕ ಕಾಳಿದಾಸ್ ಅವರು ಮಾತನಾಡಿದರು. ಸಮಾರಂಭದಲ್ಲಿ ಸಿಂಡಿಕೇಟ್ ಬ್ಯಾಂಕ್‍ನ ವತಿಯಿಂದ 10 ಮಂದಿ ಪ್ರಗತಿಪರ ರೈತರಿಗೆ ಸನ್ಮಾನ ಮಾಡಲಾಯಿತು. ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕು ಸಾವಯವ ಕೃಷಿ ಸಹಕಾರಿ ನಿಯಮಿತ ಸಂಸ್ಥೆಯ ಅಧ್ಯಕ್ಷ ಬಿ.ಪಿ. ಮುದ್ದಯ್ಯ ಪ್ರಾಸ್ತಾವಿಕ ಭಾಷಣ ಮಾಡಿದರು. ಸಂಸ್ಥೆಯ ಉಪಾಧ್ಯಕ್ಷರಾದ ಫ್ಯಾನ್ಸಿ ಗಣಪತಿ ವಂದಿಸಿದರು. ಜಿಲ್ಲೆಯ ನಾನಾ ಭಾಗಗಳಿಂದ ರೈತರು ಆಗಮಿಸಿದ್ದರು.