ದೇವಾಲಯದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಜಯವಾಡ, ಡಿ. 24: ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿಯನ್ನು ಹೊಸ ವರ್ಷ ಎಂದು ಆಚರಿಸುತ್ತೇವೆ. ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜ. 1 ರಂದು ಹೊಸ ವರ್ಷಾಚರಣೆ ಮಾಡಲಾಗುತ್ತದೆ, ಈ ಆಚರಣೆಗಳು ಇತ್ತೀಚಿನ ದಿನಗಳಲ್ಲಿ ದೇವಾಲಯಗಳಲ್ಲಿಯೂ ಸಾಮಾನ್ಯವಾಗಿದ್ದು, ಆಂಧ್ರಪ್ರದೇಶದ ಸರ್ಕಾರ ದೇವಾಲಯಗಳಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಿದೆ. ರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ ಆಂಧ್ರಪ್ರದೇಶದ ಧಾರ್ಮಿಕ ದತ್ತಿ ಇಲಾಖೆ ಜ. 1 ರಂದು ಹೊಸ ವರ್ಷಾಚರಣೆ ನಡೆಸುವದನ್ನು ಪಾಶ್ಚಿಮಾತ್ಯ ಸಂಸ್ಕೃತಿ ಎಂದು ಹೇಳಿದ್ದು ದೇವಾಲಯಗಳಲ್ಲಿ ಹೊಸ ವರ್ಷಾಚರಣೆ ನಡೆಸದಂತೆ ಸುತ್ತೋಲೆ ಹೊರಡಿಸಿದೆ. ಇಲಾಖೆಯ ಹಿಂದೂ ಧರ್ಮ ಪರಿರಕ್ಷಣ ಟ್ರಸ್ಟ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಜ. 1 ರಂದು ಹೊಸ ವರ್ಷಾಚರಣೆಯ ಪ್ರಯುಕ್ತ ಸ್ವಾಗತ ಸೂಚಿಸುವ ಬ್ಯಾನರ್‍ಗಳನ್ನು ಹಾಕುವದು ಹಾಗೂ ಹೂವಿನ ಅಲಂಕಾರಗಳನ್ನು ಮಾಡುವದನ್ನು ದೇವಾಲಯಗಳು ನಿಲ್ಲಿಸಬೇಕು. ತೆಲುಗು ಮಾತನಾಡುವ ಮಂದಿಗೆ ಯುಗಾದಿ ದಿನದಂದು ಹೊಸ ವರ್ಷಾಚರಣೆಯಾದ್ದರಿಂದ ಅಂದು ಆಚರಣೆ ನಡೆಸಬೇಕು ಎಂದು ಹೇಳಿದೆ.

ಬಿಳಿ ಕೋಟ್ ಧರಿಸಿ : ಮೋದಿಗೆ ವೈದ್ಯರ ಪತ್ರ

ನವದೆಹಲಿ, ಡಿ. 24: ವೈದ್ಯರಂತೆ ಬಿಳಿ ಕೋಟ್ ಧರಿಸಿ ಒಂದು ದಿನ ನಮ್ಮೊಂದಿಗಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಏಮ್ಸ್ ವೈದ್ಯರು ಪತ್ರ ಬರೆದಿದ್ದಾರೆ. ವೈದ್ಯರು ಅನುಭವಿಸುತ್ತಿರುವ ಸಮಸ್ಯೆಗಳು ಹಾಗೂ ಅವರಿಗೆ ಯಾವ ಪ್ರಮಾಣದಲ್ಲಿ ಒತ್ತಡ ಇರುತ್ತದೆ ಎಂಬದು ಪ್ರಧಾನಿ ಮೋದಿಗೆ ಅರ್ಥವಾಗಲೆಂದು ಏಮ್ಸ್ ಡಾಕ್ಟರ್ ಅಸೋಸಿಯೇಷನ್ ಈ ರೀತಿ ಪತ್ರ ಬರೆದಿದೆ. ಇನ್ನು ರಾಜಸ್ತಾನ ವೈದ್ಯರು ಬಡ್ತಿ ಹಾಗೂ ಹೆಚ್ಚಿನ ವೇತನಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದು ಅವರ ಸಹಕಾರದೊಂದಿಗೆ ಏಮ್ಸ್ ವೈದ್ಯರು ಈ ಪತ್ರವನ್ನು ಬರೆದಿದ್ದಾರೆ. ಹೆಚ್ಚು ಆಕ್ಟಿವ್ ಆಗಿರುವ ಪ್ರಧಾನಿ ಹೊಂದಿರುವದು ನಮ್ಮ ಅದೃಷ್ಟ. ನೀವು ವೈದ್ಯರಂತೆ ಬಿಳಿ ಕೋಟ್ ಧರಿಸಿ ಒಂದು ದಿನ ನಮ್ಮೊಂದಿಗೆ ಕಳೆಯಿರಿ. ಆಗ ನಾವು ಇಲ್ಲಿರುವ ಕಳಪೆ ಸೌಕರ್ಯಗಳನ್ನೇ ಬಳಸಿಕೊಂಡು ಹೇಗೆ ಕೆಲಸ ನಿರ್ವಹಿಸಬೇಕು ಹಾಗೂ ಕೆಲವು ರೋಗಿಗಳು ನಡೆದುಕೊಳ್ಳುವ ರೀತಿಯನ್ನೂ ಕೂಡ ನಾವು ಸಹಿಸಿ ಕೊಳ್ಳಬೇಕು ಎನ್ನುವದು ನಿಮಗೆ ತಿಳಿಯುತ್ತದೆ ಎಂಬದನ್ನು ಪತ್ರದಲ್ಲಿ ಬರೆದಿದ್ದಾರೆ.

ಟಿ.ವಿ. ದಿನಕರನ್‍ಗೆ ಭರ್ಜರಿ ಜಯ

ಚೆನ್ನೈ, ಡಿ. 24: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನಿಂದ ತೆರವುಗೊಂಡಿದ್ದ ಆರ್‍ಕೆ ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದ ಬಂಡಾಯ ನಾಯಕ, ಪಕ್ಷೇತರ ಅಭ್ಯರ್ಥಿ ಟಿ.ವಿ. ದಿನಕರನ್ 40 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಬೆಳಿಗ್ಗೆ ಆರಂಭವಾದ ಮತ ಎಣಿಕೆ ಪ್ರಕ್ರಿಯೆಯ ಪ್ರಾರಂಭದ ಹಂತದಿಂದಲೂ ಪ್ರತಿಸ್ಪರ್ಧಿಗಳ ವಿರುದ್ಧ ಬೃಹತ್ ಮೊತ್ತದ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಟಿಟಿವಿ ದಿನಕರನ್ ಅಂತಿಮವಾಗಿ ಜಯವನ್ನು ದಕ್ಕಿಸಿಕೊಂಡಿದ್ದು, ಜಯಲಲಿತಾ ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದ ಆಯ್ಕೆಗೊಂಡಿದ್ದಾರೆ. ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿಟಿವಿ ದಿನಕರನ್, ತಮ್ಮನ್ನು ಜಯಲಲಿತಾ ಅವರ ನಿಜವಾದ ರಾಜಕೀಯ ಪರಂಪರೆಗೆ ಸೇರಿದ ರಾಜಕಾರಣಿ ಎಂದು ಹೇಳಿಕೊಂಡಿದ್ದು, ಇನ್ನು ಮೂರು ತಿಂಗಳುಗಳಲ್ಲಿ ತಮಿಳುನಾಡಿನ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ತಮ್ಮನ್ನು ಆಯ್ಕೆ ಮಾಡಿರುವ ಜನತೆ ಹಾಗೂ ಕಾರ್ಯಕರ್ತರಿಗೆ ದಿನಕರನ್ ಧನ್ಯವಾದ ತಿಳಿಸಿದ್ದಾರೆ. ದಿನಕರನ್ ವಿರುದ್ಧ ಸ್ಪರ್ಧಿಸಿದ್ದ ಎ.ಐ.ಎ.ಡಿ.ಎಂ.ಕೆ.ಯ ನಾಯಕ ಮಧುಸೂಧನ್ 41,718 ಮತಗಳು ಹಾಗೂ ಡಿ.ಎಂ.ಕೆ. ನಾಯಕ ಮರುಥು ಗಣೇಶ್ 24,075 ಮತಗಳನ್ನು ಗಳಿಸಿದ್ದಾರೆ

ಪಾಕ್ ವಿರುದ್ಧ ಆಕ್ರಮಿತ ಕಾಶ್ಮೀರಿಗಳ ಪ್ರತಿಭಟನೆ

ಗಿಲ್ಗಿಟ್ ಬಾಲ್ಟಿಸ್ತಾನ್, ಡಿ. 24: ಪಾಕಿಸ್ತಾನ ಕಾಶ್ಮೀರವನ್ನು ತನ್ನ ವಶಕ್ಕೆ ಪಡೆಯಲು ಸಂಚು ರೂಪಿಸುತ್ತಿರಬೇಕಾದರೆ, ಇತ್ತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಜನರು ಪಾಕಿಸ್ತಾನದ ವಿರುದ್ಧವೇ ಸಿಡಿದೆದ್ದಿದ್ದಾರೆ. ಗಿಲ್ಗಿಟ್ ಬಾಲ್ಟಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ನಡೆಸಿರುವ ಸ್ಥಳೀಯರು, ಪಾಕಿಸ್ತಾನದವರು ನಮ್ಮನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬೀದಿಗಿಳಿದು ಪ್ರತಿಭಟನೆ ನಡೆಸಿರುವ ಪಾಕ್ ಆಕ್ರಮಿತ ಕಾಶ್ಮೀರದ ಜನತೆ, ಪಾಕ್ ವಿರುದ್ಧ ಘೋಷಣೆ ಕೂಗಿದ್ದು, ಪಾಕ್ ಸರ್ಕಾರ ಹೇರಿರುವ ತೆರಿಗೆ ಪದ್ಧತಿಯನ್ನು ವಿರೋಧಿಸಿದ್ದಾರೆ.

ಜೈರಾಮ್ ಠಾಕೂರ್ ಹಿಮಾಚಲ ಪ್ರದೇಶದ ಸಿಎಂ

ಶಿಮ್ಲಾ, ಡಿ. 24: ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜೈರಾಮ್ ಠಾಕೂರ್ ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ಇಂದು ಶಿಮ್ಲಾದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಹಿಮಾಚಲ ಪ್ರದೇಶದ ಕೇಂದ್ರ ವೀಕ್ಷಕಿ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನರೇಂದ್ರ ಸಿಂಗ್ ತೊಮರ್ ಸಭೆಯಲ್ಲಿ ಭಾಗವಹಿಸಿದ್ದರು. ಹಿಮಾಚಲ ಪ್ರದೇಶ ಶಾಸಕಾಂಗ ಪಕ್ಷದ ನಾಯಕರಾಗಿ ಜೈರಾಮ್ ಠಾಕೂರ್ ಅವರ ಹೆಸರನ್ನು ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ದುಮಲ್ ಸೂಚಿಸಿದ್ದು ಪಕ್ಷದ ಸದಸ್ಯರೆಲ್ಲರೂ ಸ್ವಾಗತಿಸಿದರು ಎಂದು ನರೇಂದ್ರ ಸಿಂಗ್ ತೊಮರ್ ತಿಳಿಸಿದ್ದಾರೆ. ನಾಳೆ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಯಿದ್ದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಾಲ್ಗೊಳ್ಳುವ ನಿರೀಕ್ಷೆಯಿದೆ. ನಾಳೆಯಲ್ಲದಿದ್ದರೆ ಡಿಸೆಂಬರ್ 27ರಂದು ಬುಧವಾರ ಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಅಪ್ರಾಪ್ತರ ಅತ್ಯಾಚಾರ : ಗಲ್ಲು ಶಿಕ್ಷೆ ಚಿಂತನೆ

ಬೆಂಗಳೂರು, ಡಿ. 24: 12 ವರ್ಷ ಮತ್ತು ಅದಕ್ಕಿಂತ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಇತ್ತೀಚೆಗೆ ಮಧ್ಯ ಪ್ರದೇಶ ವಿಧಾನಸಭೆ ಜಾರಿಗೆ ತಂದ ಮಸೂದೆಯನ್ನು ಅನುಸರಿಸಲು ಕರ್ನಾಟಕ ಮುಂದಾಗಿದೆ. ಇಂತಹದೇ ಕಾನೂನನ್ನು ಜಾರಿಗೆ ತಂದು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವವರಿಗೆ ಉಗ್ರ ಶಿಕ್ಷೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. 12 ವರ್ಷ ಮತ್ತು ಅದಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಮಸೂದೆಯನ್ನು ಮಧ್ಯ ಪ್ರದೇಶ ವಿಧಾನಸಭೆ ಕಳೆದ ಡಿಸೆಂಬರ್ 4ರಂದು ಅನುಮೋದನೆ ಮಾಡಿತ್ತು. ಈ ಮೂಲಕ ಇಂತಹ ಮಸೂದೆ ಜಾರಿ ತಂದ ಮೊದಲ ರಾಜ್ಯ ಮಧ್ಯಪ್ರದೇಶವಾಗಿತ್ತು.

“ತೆಂಬಿನ್” ಚಂಡಮಾರುತಕ್ಕೆ 180 ಬಲಿ

ಮನಿಲಾ, ಡಿ. 24: ದಕ್ಷಿಣ ಫಿಲಿಪ್ಪೀನ್ಸ್‍ನಲ್ಲಿ ಬೀಸಿದ ‘ತೆಂಬಿನ್’ ಚಂಡಮಾರುತದ ಪರಿಣಾಮ ಪ್ರವಾಹ ಮತ್ತು ಭೂ ಕುಸಿತ ಉಂಟಾಗಿದೆ. ಈ ಪ್ರಕೃತಿ ವಿಕೋಪದಿಂದ ಸುಮಾರು 180 ಮಂದಿ ಸಾವನ್ನಪ್ಪಿದ್ದಾರೆ. ಫಿಲಿಪ್ಪೀನ್ಸ್‍ನ ಮಿಂಡಾನಾವೋ ದ್ವೀಪದಲ್ಲಿ ಈ ಚಂದಮಾರುತದ ಹಾವಳಿ ನಡೆದಿದ್ದು ಘಟನೆಯಲ್ಲಿ 160 ಮಂದಿ ನಾಪತ್ತೆಯಾಗಿದ್ದಾರೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು ಸಾವು ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾದ್ಯತೆಗಳಿವೆ. ಕಾಣೆಯಾದವರಿಗಾರಿ ಶೋಧಕಾರ್ಯ ಮುಂದುವರಿದಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಸ್ಸಾಂನ ಸಾಹಿತಿಗಳಿಗೆ ಕುವೆಂಪು ಪುರಸ್ಕಾರ

ತೀರ್ಥಹಳ್ಳಿ, ಡಿ. 24: ಅಸ್ಸಾಂನ ಪ್ರಸಿದ್ಧ ಸಾಹಿತಿಗಳಾದ ಹೊಮೆನ್ ಬೋರ್ಗೊಹೈನ್ ಮತ್ತು ನೀಲಮಣಿ ಪೂಕಾನ್ ಅವರುಗಳು ಪ್ರಸಕ್ತ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿನ ಗಣನೀಯ ಸೇವೆ ಸಲ್ಲಿಸಿದ ರಾಷ್ಟ್ರಮಟ್ಟದ ಸಾಹಿತಿಗಳನ್ನು ಪುರಸ್ಕರಿಸುವ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಈ ಬಾರಿ ಇಬ್ಬರು ಅಸ್ಸಾಮಿಸಾಹಿತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಪ್ರತಿಷ್ಠಾನದ ಸಹ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ತಿಳಿಸಿದರು. ಪ್ರಶಸ್ತಿಯು ರೂ. 2.50 ಲಕ್ಷ ನಗದು, ಸ್ಮರಣಿಕೆಯನ್ನು ಒಳಗೊಂಡಿದ್ದು ಹಿರಿಯ ಸಾಹಿತಿಗಳು ಗೌಹಾಟಿಯಿಂದ ಆಗಮಿಸಲು ಅವರ ಆರೋಗ್ಯ ಹಾಗೂ ವಯಸ್ಸಿನ ಕಾರಣಕ್ಕೆ ಸಾದ್ಯವಾಗುತ್ತಿಲ್ಲ. ಹೀಗಾಗಿ ತಾ. 29 ರಂದು ಕುಪ್ಪಳ್ಳಿಯಲ್ಲಿ ನಡೆಯುವ ಕುವೆಂಪು ಅವರ 113ನೇ ಜಯಂತಿಯ ಬದಲು ಗೌಹಾಟಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುತ್ತಿದೆ.