ಪೊನ್ನಂಪೇಟೆ, ಡಿ. 24: ಬಿಟ್ಟಂಗಾಲ ಸಮೀಪದ ಕಂಡಂಗಾಲ ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ (ಯು.ಎಸ್.ಸಿ.) ಬೇರಳಿನಾಡ್ ಸಂಸ್ಥೆ ವತಿಯಿಂದ ಹಾಕಿ ಕೂರ್ಗ್ ಸಹಯೋಗದಲ್ಲಿ ಕಂಡಂಗಾಲದ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಚಂದೂರ ಕಮಲ ಸ್ಮಾರಕ 5ನೇ ವರ್ಷದ ಆಹ್ವಾನಿತ ತಂಡಗಳ ಜಿಲ್ಲಾ ಮಟ್ಟದ ಪುರುಷರ ಹಾಕಿ ಪಂದ್ಯಾವಳಿ ‘ಲೋಟಸ್ ಕಪ್-2017’ರ ಭಾನುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಎದುರಾಳಿ ತಂಡವನ್ನು ಪರಾಭವಗೊಳಿಸಿದ ಎಂ.ಆರ್.ಎಫ್. ಮೂರ್ನಾಡು ಮತ್ತು ಇ.ವೈ.ಸಿ. ಬೇಗೂರು ತಂಡ ಅಂತಿಮವಾಗಿ ಫೈನಲ್ಸ್ ಪ್ರವೇಶಿಸಿದೆ. ಈ ಎರಡು ಬಲಿಷ್ಠ ತಂಡಗಳು ಪ್ರತಿಷ್ಠಿತ ‘ಲೋಟಸ್ ಕಪ್-2017’ರ ವಿನ್ನರ್ ಪ್ರಶಸ್ತಿಗಾಗಿ ತಾ. 25 ರಂದು (ಇಂದು) ಹಣಾಹಣಿ ನಡೆಸಲಿದೆ.

ಭಾನುವಾರ ಬೆಳಿಗ್ಗೆ ನಡೆದ ಪಂದ್ಯಾವಳಿಯ ಮೊದಲ ಸೆಮಿಫೈನಲ್‍ನಲ್ಲಿ ಎಂ.ಆರ್.ಎಫ್. ಮೂರ್ನಾಡು ತಂಡವು ಕೋಣನಕಟ್ಟೆ ಇಲೆವೆನ್ಸ್ ತಂಡವನ್ನು 2-1 ಗೋಲುಗಳಿಂದ ಮಣಿಸಿ ಫೈನಲ್ಸ್ ಪ್ರವೇಶಿಸುವ ಕನಸನ್ನು ನನಸಾಗಿಸಿತು. ಆರಂಭದಿಂದಲೇ ಬಿರುಸಿನ ಆಟಕ್ಕೆ ಒತ್ತು ನೀಡಿದ ಎಂ.ಆರ್.ಎಫ್. ಮೂರ್ನಾಡು ತಂಡ ಎದುರಾಳಿ ತಂಡದ ‘ಡಿ’ ಆವರಣದೊಳಗೆ ನಿರಂತರವಾಗಿ ಲಗ್ಗೆಯಿಡುತ್ತಿತ್ತು. ಈ ವೇಳೆ ದೊರೆತ ಉತ್ತಮ ಪಾಸ್‍ವೊಂದನ್ನು ಸಮರ್ಪಕವಾಗಿ ಬಳಸಿಕೊಂಡ ಎಂ.ಆರ್.ಎಫ್. ತಂಡದ ಯಶ್ವನ್ 5ನೇ ನಿಮಿಷದಲ್ಲಿ ಮಿಂಚಿನ ಫೀಲ್ಡ್ ಗೋಲೊಂದನ್ನು ಭಾರಿಸಿ ತಂಡದ ಖಾತೆ ತೆರೆದರು.

ನಂತರ ಆಟದ ತೀವ್ರತೆಯನ್ನು ತುಸು ಹೆಚ್ಚಿಸಿಕೊಂಡ ಕೋಣನಕಟ್ಟೆ ಇಲೆವೆನ್ಸ್ ತಂಡ ಗೋಲುಗಳಿಸುವ ಯತ್ನಗಳನ್ನು ನಿರಂತರವಾಗಿ ಮಾಡುತ್ತಿದ್ದರೂ ಪ್ರಥಮಾರ್ಧದ ಅಂತ್ಯದವರೆಗೆ ಇದು ಸಾಧ್ಯವಾಗಲಿಲ್ಲ. ದ್ವಿತೀಯಾರ್ಧ ಆರಂಭಗೊಳ್ಳುತ್ತಿದ್ದಂತೆ ಬಿರುಸಿನ ಆಟವಾಡಿದ ಕೋಣನಕಟ್ಟೆ ಇಲೆವೆನ್ಸ್ ತಂಡದ ದೀಪಕ್ 41ನೇ ನಿಮಿಷದಲ್ಲಿ ಆಕರ್ಷಕವಾಗಿ ಫೀಲ್ಡ್ ಗೋಲೊಂದನ್ನು ದಾಖಲಿಸಿ ತಂಡದ ಗೋಲಿನ ಅಂತರವನ್ನು 1-1ಕ್ಕೆ ಸಮನಾಗಿಸಿದರು. ಬಳಿಕ ಎಷ್ಟೇ ಪ್ರಯತ್ನಿಸಿದರೂ ಕೋಣನಕಟ್ಟೆ ಇಲೆವೆನ್ಸ್ ತಂಡದ ಗೋಲು ಗಳಿಸುವ ಕನಸು ಈಡೇರಲೇ ಇಲ್ಲ. ಎಂ.ಆರ್.ಎಫ್. ತಂಡ ಮತ್ತೆ ಗೋಲು ಗಳಿಸುವ ನಿರಂತರ ಯತ್ನ ಮಾಡುತ್ತಿದ್ದಂತೆ ತಂಡದ ಅತಿಥಿ ಆಟಗಾರ (ರೈಲ್ವೇಸ್ ತಂಡದ) ಪೂಣಚ್ಚ 46ನೇ ನಿಮಿಷದಲ್ಲಿ ಉತ್ತಮ ಗೋಲೊಂದನ್ನು ಭಾರಿಸಿ ತಂಡದ ವಿಜಯ ನಿರ್ಣಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಳಿಕ ಎದುರಾಳಿ ತಂಡ ಗೋಲು ಗಳಿಸುವ ಎಲ್ಲಾ ಪ್ರಯತ್ನಗಳಿಗೆ ವಿಜೇತ ತಂಡದ ಆಟಗಾರರು ತಣ್ಣೀರು ಎರಚುತ್ತಲೇ ಬಂದರು.

ಮಧ್ಯಾಹ್ನ ನಡೆದ 2ನೇ ಸೆಮಿಫೈನಲ್ಸ್ ಪಂದ್ಯದಲ್ಲಿ ಇ.ವೈ.ಸಿ. ಬೇಗೂರು ತಂಡವು ಎಸ್.ಆರ್.ಸಿ. ಕಾಕೋಟುಪರಂಬು ತಂಡವನ್ನು 2-0 ಗೋಲುಗಳಿಂದ ಮಣಿಸಿ ಭರವಸೆಯೊಂದಿಗೆ ಅಂತಿಮ ಹಂತ ಪ್ರವೇಶಿಸಿತು. ಪಂದ್ಯ ಆರಂಭವಾಗುತ್ತಿ ದ್ದಂತೆ ಬಿರುಸಿನ ಆಟಕ್ಕೆ ಒತ್ತು ನೀಡಿದ ಉಭಯ ತಂಡಗಳು ಫೈನಲ್ ಪ್ರವೇಶಿಸುವ ಆಸೆಯೊಂದಿಗೆ ಎದುರಾಳಿ ತಂಡ ಗೋಲು ಪೆಟ್ಟಿಗೆಯನ್ನಷ್ಟೆ ಗುರಿಯಾಗಿಸಿ ಕೊಂಡಿತ್ತು. ಈ ವೇಳೆ ವಿಜೇತ ತಂಡದ ಅತಿಥಿ ಆಟಗಾರ (ಎಂ.ಇ.ಜಿ. ತಂಡದ) ಗಣಪತಿ 7ನೇ ನಿಮಿಷದಲ್ಲಿ ಮಿಂಚಿನ ಫೀಲ್ಡ್ ಗೋಲೊಂದನ್ನು ಹೊಡೆದು ತಂಡದಲ್ಲಿ ಭರವಸೆ ಮೂಡಿಸಿದರು.

ನಂತರ ಮತ್ತಷ್ಟು ಉತ್ಸಾಹದಿಂದ ಆಟವಾಡಿದ ಇ.ವೈ.ಸಿ. ತಂಡ ಎದುರಾಳಿ ತಂಡದ ‘ಡಿ’ ಆವರಣದೊಳಗೆ ಲಗ್ಗೆಯಿಡುತ್ತಾ ಗೋಲುಗಳಿಸುವ ಪ್ರಯತ್ನ ಮಾಡುತ್ತಿದ್ದರೂ, ಎಸ್.ಆರ್.ಸಿ. ತಂಡದ ಗೋಲು ಕೀಪರ್‍ನನ್ನು ವಂಚಿಸುವದು ಕಷ್ಟವಾಗುತ್ತಿತ್ತು. ಈ ವೇಳೆ ವಿಜೇತ ತಂಡಕ್ಕೆ ಅದೃಷ್ಟವೆಂಬಂತೆ ದೊರೆತ ಪೆನಾಲ್ಟಿ ಕಾರ್ನರ್‍ನ ಸಹಾಯದಿಂದ ತಂಡದ ಅತಿಥಿ ಆಟಗಾರ (ಎಂ.ಇ.ಜಿ. ತಂಡದ) ಮಿಲನ್ 27ನೇ ನಿಮಿಷದಲ್ಲಿ ಆಕರ್ಷಕ ಗೋಲು ಭಾರಿಸಿ ತಂಡದ ಅಂತರವನ್ನು ಹೆಚ್ಚಿಸುವಲ್ಲಿ ನೆರವಾದರು. ಬಳಿಕ ಎಷ್ಟೇ ಪ್ರಯತ್ನಿಸಿದರೂ ಗೋಲು ಮಾತ್ರ ದಾಖಲಾಗಲಿಲ್ಲ. ಇದರಿಂದ ಇ.ವೈ.ಸಿ. ತಂಡಕ್ಕೆ ವಿಜಯ ನಿಶ್ಚಯವಾಯಿತ್ತು.

ಫೈನಲ್ ತಾ. 25 ರಂದು (ಇಂದು) ಮಧ್ಯಾಹ್ನ 2.30 ಗಂಟೆಗೆ ನಡೆಯಲಿದೆ.

ಭಾನುವಾರ ನಡೆದ ಪಂದ್ಯಗಳಲ್ಲಿ ತೀರ್ಪುಗಾರರಾಗಿ ಮೂಕಚಂಡ ನಾಚಪ್ಪ, ನೆಲ್ಲಮಕ್ಕಡ ಪವನ್, ಕುಪ್ಪಂಡ ದಿಲನ್ ಮತ್ತು ಚೋಯಮಾಡಂಡ ಚಂಗಪ್ಪ ಕಾರ್ಯನಿರ್ವಹಿಸಿದರು. ಮೇಕತಂಡ ಟೀಸಾ ಬೋಪಯ್ಯ, ಕರವಂಡ ಅಪ್ಪಣ್ಣ ಹಾಗೂ ಮುಂಡ್ಯೋಳಂಡ ದರ್ಶನ್ ತಾಂತ್ರಿಕ ಸಮಿತಿಯಲ್ಲಿ ಕೆಲಸ ಮಾಡಿದರು.