ಸೋಮವಾರಪೇಟೆ,ಡಿ.24: ಕಣದಲ್ಲಿ ಶೇಖರಿಸಿಟ್ಟಿದ್ದ ಸುಮಾರು 10 ಕ್ವಿಂಟಾಲ್ ಭತ್ತವನ್ನು ಕಾಡಾನೆಗಳು ತಿಂದು ನಷ್ಟಪಡಿಸಿರುವ ಘಟನೆ ತಾಲೂಕಿನ ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಚಿಕ್ಕಾರ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.ಚಿಕ್ಕಾರ ಗ್ರಾಮದ ಕುಸುಮ ಎಂಬವರ ಕಣದಲ್ಲಿ ಬಡಿದ ಭತ್ತವನ್ನು ಮೂಟೆಗಳಲ್ಲಿ ಕಟ್ಟಿ ಇಡಲಾಗಿತ್ತು. ಶನಿವಾರ ಮಧ್ಯರಾತ್ರಿ ಮಾಲಂಬಿ ಮೀಸಲು ಅರಣ್ಯದಿಂದ ಆಹಾರ ಅರಸುತ್ತ ಗ್ರಾಮಕ್ಕೆ ಪ್ರವೇಶಿಸಿದ ಕಾಡಾನೆಗಳು ಮನಸೋಯಿಚ್ಛೆ ಭತ್ತ ತಿಂದು ಉಳಿದವುಗಳನ್ನು ಎಳೆದಾಡಿವೆ.

ಕಣದಲ್ಲಿದ್ದ 25 ಚೀಲಗಳನ್ನು ಎಳೆದಾಡಿ ಸುಮಾರು 10ಕ್ವಿಂಟಾಲ್ ಭತ್ತವನ್ನು ತಿಂದಿವೆ. ಭತ್ತ ನಾಟಿ ಮಾಡಿದ ದಿನದಿಂದಲೂ ಬೆಳೆಯ ರಕ್ಷಣೆಗೆ ಹೆಚ್ಚಿನ ಆಸಕ್ತಿ ವಹಿಸಲಾಗಿತ್ತು. ಅಕಾಲಿಕ ಮಳೆ, ಕಾಡು ಪ್ರಾಣಿಗಳು ತಿಂದು ಉಳಿದ ಫಸಲನ್ನು ಕಣಕ್ಕೆ ತಂದು ಸಂಗ್ರಹಿಸಿಡಲಾಗಿತ್ತು. ಈಗ ಕಾಡಾನೆಗಳು ತಿಂದಿವೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತ ಮಹಿಳೆ ಕುಸುಮ ಅವರು ಅಳಲು ತೋಡಿಕೊಂಡಿದ್ದಾರೆ. ಸಾಕಷ್ಟು ಶ್ರಮ ವಹಿಸಿ ಕೈಗೊಂಡಿದ್ದ ಭತ್ತ ಕೃಷಿ ಸಂಪೂರ್ಣ ನಷ್ಟವಾಗಿದ್ದು, ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಕಾಡಾನೆಗಳ ಪೀಡಿತ ಪ್ರದೇಶದಲ್ಲಿ ಕೂಗೂರು ಗ್ರಾಮದಿಂದ ಅಬ್ಬೂರುಕಟ್ಟೆವರೆಗೆ 8 ಕಿ.ಮೀ. ವ್ಯಾಪ್ತಿಯಲ್ಲಿ ಆನೆ ಕಂದಕ ನಿರ್ಮಿಸಲಾಗಿದೆ. ಮಾದಗಿತ್ತಿಕೆರೆ, ಎಮ್ಮೆಗುಂಡಿ ಸಮೀಪದ ಕಂದಕವನ್ನು ದಾಟಿ ಕಾಡಾನೆಗಳು ಗ್ರಾಮಕ್ಕೆ ನುಸುಳಿ ಫಸಲು ನಷ್ಟಪಡಿಸುತ್ತಿವೆ. ಆದರೆ ಅರಣ್ಯ ಇಲಾಖೆಯಿಂದ ಸೂಕ್ತ ಸಮಯದಲ್ಲಿ ಫಸಲು ನಷ್ಟದ ಪರಿಹಾರ ಸಿಗುತ್ತಿಲ್ಲ. ರೈತರು ಬದುಕುವದಾದರೂ ಹೇಗೆ ಎಂದು ಗೌಡಳ್ಳಿ ಗ್ರಾ.ಪಂ. ಸದಸ್ಯ ಹೇಮಂತ್ ಪ್ರಶ್ನಿಸಿದ್ದು, ಕೂಡಲೆ ಕಂದಕ ದುರಸ್ತಿ ಪಡಿಸಲು ಇಲಾಖೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕೂಗೂರು ಬೆಟ್ಟ, ಕಾಟಿಕಲ್ಲು ಬೆಟ್ಟದಲ್ಲಿ ಕಲ್ಲುಬಂಡೆಗಳಿದ್ದು, ಆನೆ ಕಂದಕ ನಿರ್ಮಿಸಲು ಅಸಾಧ್ಯವಾಗಿದೆ. ಹಿಟಾಚಿ ತೆರಳುತ್ತಿಲ್ಲ. ಹಿರಿಯ ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸಿ, ಕಾಡಾನೆ ಹಾವಳಿ ತಡೆಗಟ್ಟಲು ಕ್ರಮಕೈಗೊಳ್ಳಲಿದ್ದಾರೆ. ಕಾಡಾನೆಗಳು ಭತ್ತ ತಿಂದಿರುವ ಬಗ್ಗೆ ಇಲಾಖೆಗೆ ಮಾಹಿತಿ ನೀಡಲಾಗುವದು ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಗಣೇಶ್ ತಿಳಿಸಿದ್ದಾರೆ.