ಕೂಡಿಗೆ, ಡಿ. 22: ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮವಾಗಿ ಸರ್ಕಾರದ ವತಿಯಿಂದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ 112 ಎಕರೆ ಪ್ರದೇಶದಲ್ಲಿ ಮೇಕೆ ಹಾಲು ಉತ್ಪಾದನಾ ಮತ್ತು ಸಂಸ್ಕರಣ ಘಟಕದ ಕಾಮಗಾರಿಯು ಪ್ರಗತಿಯತ್ತ ಸಾಗುತ್ತಿದೆ.
ಎಂಟು ತಿಂಗಳ ಹಿಂದೆ ಕರ್ನಾಟಕ ರಾಜ್ಯ ಪಶು ಸಂಗೋಪನಾ ಮತ್ತು ರೇಷ್ಮೆ ಖಾತೆ ಸಚಿವ ಎ. ಮಂಜು ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ರಾಜ್ಯ ಸರ್ಕಾರದ ಈ ಯೋಜನೆಯು ರೂ. 5 ಕೋಟಿ ವೆಚ್ಚದ್ದಾಗಿದ್ದು, ಕಾಮಗಾರಿಗೆ ಪಶು ಸಂಗೋಪನ ಇಲಾಖೆಗೆ ರೂ. 2 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.
ಮೇಕೆ ಹಾಲು ಉತ್ಪಾದನೆಯು ರಾಜ್ಯದ ಬೀದರ್, ಮಂಗಳೂರು ಕಡೆಗಳಲ್ಲಿ ಖಾಸಗಿಯವರು ನಡೆಸುತ್ತಿದ್ದು, ಆ ಭಾಗದ ಜನರಿಗೆ ಪ್ರಯೋಜನವಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿ ಹೆಚ್ಚು ವಿಸ್ತಾರವನ್ನು ಹೊಂದಿರುವ ಕೊಡಗು ಜಿಲ್ಲೆಯ ಕೂಡಿಗೆಯ ಗ್ರಾಮ ಪಂಚಾಯಿತಿಯ ಬ್ಯಾಡಗೊಟ್ಟದಲ್ಲಿ ಘಟಕವನ್ನು ಪ್ರಾರಂಭಿಸಲು ಚಿಂತನೆ ನಡೆಸಿದ ಹಿನ್ನೆಲೆ ಕಾಮಗಾರಿ ಸಾಗುತ್ತಿದೆ.
ಮುಂದಿನ ದಿನಗಳಲ್ಲಿ ಮೇಕೆಗಳಿಗೆ ಆಧುನಿಕ ರೀತಿಯ ಪಂಜರ ಹಾಗೂ ಹುಲ್ಲುಗಾವಲನ್ನು ನಿರ್ಮಿಸಲು ಈಗಾಗಲೇ ಗುರುತಿಸಲಾಗಿರುವ 112 ಎಕರೆ ಜಾಗದಲ್ಲಿ ಸಿಮೆಂಟ್ ಕಂಬ ಹಾಗೂ ತಂತಿ ಬೇಲಿಯನ್ನು ನಿರ್ಮಿಸ ಲಾಗಿದೆ. ಈ ಪ್ರದೇಶದ ವ್ಯಾಪ್ತಿ ಯೊಳಗೆ 50 ಜಾತಿಯ ಹೈಬ್ರಿಡ್ ಹುಲ್ಲಿನ ತಳಿಗಳನ್ನು ಬೆಳೆಸುವ ಯೋಜನೆಯಿದೆ. ಅಲ್ಲದೆ ರಾಜ್ಯದಲ್ಲಿನ ಬರಗಾಲಪೀಡಿತ ಪ್ರದೇಶಗಳಿಗೆ ಇಲ್ಲಿಂದ ಬೆಳೆಸಲಾದ ಹುಲ್ಲನ್ನು ಕಳುಹಿಸುವ ಯೋಜನೆಯು ಇದಾಗಿದೆ. ಇದರ ಜೊತೆಯಲ್ಲಿ ಮಲೆನಾಡು ಗಿಡ್ಡ ರಾಸುಗಳು ಮತ್ತು ಸ್ಥಳೀಯ ಹಸುಗಳನ್ನು ಪ್ರೋತ್ಸಾಹಿಸುವ ಯೋಜನೆಯು ಇದೆ. ಪಶು ಸಂಗೋಪನ ಇಲಾಖೆಯ ರಾಜ್ಯ ಉಪನಿರ್ದೇಶಕರು ಇದರ ಉಸ್ತುವಾರಿಯನ್ನು ವಹಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ