ಶ್ರೀಮಂಗಲ, ಡಿ. 22: ಪೊನ್ನಂಪೇಟೆ ತಾಲೂಕು ರಚನೆ ಹೋರಾಟ ಸಮಿತಿಯ 52ನೇ ದಿನದ ಅವಿರತ ಹೋರಾಟಕ್ಕೆ ತಾಲೂಕಿ ನಾದ್ಯಂತ ಹಲವು ಸಂಘಟನೆಗಳಿಂದ ಬೆಂಬಲ ವ್ಯಕ್ತಗೊಂಡವು.

ಗೋಣಿಕೊಪ್ಪ ಕೊಡವ ಸಮಾಜ, ಇಗ್ಗುತಪ್ಪ ಕೊಡವ ಸಂಘ, ಗೋಣಿಕೊಪ್ಪ, ಕಾವೇರಿ ಮಹಿಳಾ ಸಮಾಜ, ಗೋಣಿಕೊಪ್ಪ, ಎಸ್.ಕೆ.ಎಸ್.ಎಫ್, ದಕ್ಷಿಣ ಕೊಡಗು, ಜಾಮಿಯಾ ಮಸೀದಿ, ಪೊನ್ನಂಪೇಟೆಯ ನೂರಾರು ಪದಾಧಿಕಾರಿಗಳು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಹೋರಾಟಗಾರರು ಗೋಣಿಕೊಪ್ಪ ಕಡೆಯಿಂದ ಕಾಲುನಡೆಯಲ್ಲಿ ಆಗಮಿಸಿದರೆ, ಕುಟ್ಟದಿಂದ ಪೊನ್ನಂಪೇಟೆಗೆ ಎಸ್.ಕೆ.ಎಸ್.ಎಸ್.ಎಫ್. ಸಂಘಟನೆಯ ಯುವಕರು ಬೈಕ್‍ರ್ಯಾಲಿ ನಡೆಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಹೋರಾಟ ಸಮಿತಿಯ ಪದಾಧಿಕಾರಿ ಕಾಳಿಮಾಡ ಮೋಟಯ್ಯ ಪ್ರಾಸ್ತಾವಿಕ ನುಡಿಯಾಡಿದರು. ಮೂಕಳೆರ ಸುಮನ್ ತಾಲೂಕು ರಚನೆಗೆ ಈಗಾಗಲೇ ಪೂರಕವಾಗಿರುವ ಅಂಶಗಳನ್ನು ತಿಳಿಸಿದರು. ಹೋರಾಟಗಾರರನ್ನು ಚೆಪ್ಪುಡಿರ ಸೋಮಯ್ಯ, ಆಲಿರ ಎರ್ಮ ಹಾಜಿ, ಮೂಕಳೆರ ಕುಶಾಲಪ್ಪ ಹಾಗೂ ಪದಾಧಿಕಾರಿಗಳು ಅತ್ಮೀಯವಾಗಿ ಬರಮಾಡಿಕೊಂಡರು. ಗೋಣಿಕೊಪ್ಪ ಕೊಡವ ಸಮಾಜದ ವತಿಯಿಂದ ಹತ್ತು ನಿಮಿಷಗಳ ಕಾಲ ಸಾಂಕೇತಿಕವಾಗಿ ರಸ್ತೆ ತಡೆ ಮಾಡಿ ತಮ್ಮ ಹಾಗೂ ಇನ್ನಿತರ ಸಂಘಟನೆಗಳ ಬೆಂಬಲ ಸೂಚಿಸಿದರು.

ಗೋಣಿಕೊಪ್ಪ ಕೊಡವ ಸಮಾಜ ಅಧ್ಯಕ್ಷ ಚೆಕ್ಕೆರ ಸೋಮಯ್ಯ, ಪದಾಧಿಕಾರಿ ಸಣ್ಣುವಂಡ ವಿಶ್ವನಾಥ, ಕಾವೇರಿ ಮಹಿಳಾ ಸಮಾಜದ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೆಲ್ವಿ ಮಾತನಾಡಿದರು. ಚೆಪ್ಪುಡಿರ ಸೋಮಯ್ಯ, ಮೂಕಳೆರ ಕುಶಾಲಪ್ಪ, ಚೆಟ್ರುಮಾಡ ಶಂಕ್ರು ನಾಚಪ್ಪನವರು ತಾಲೂಕು ರಚನೆಯ ಅವಶ್ಯಕತೆಯ ಪೂರ್ವಾಪರ ವಿಚಾರಧಾರೆಯನ್ನು ಮಂಡಿಸಿದರು.