ಸಿದ್ದಾಪುರ, ಡಿ.21: ಸಾಲಬಾಧೆಯಿಂದ ವ್ಯಾಪಾರಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಕೊಂಡಂಗೇರಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

ಗ್ರಾಮದ ನಿವಾಸಿ ಅಬೂಬಕ್ಕರ್ (57) ಎಂಬವರು ವ್ಯಾಪಾರಕ್ಕೆಂದು ಬ್ಯಾಂಕಿನಿಂದ ಸಾಲವನ್ನು ಪಡೆದುಕೊಂಡು ತೀರಿಸಲಾಗದೆ ಮಾನಸಿಕವಾಗಿ ನೊಂದು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವ್ಯಕ್ತಿಯು ರೂ. 5 ಲಕ್ಷ ಸಾಲ ಪಡೆದುಕೊಂಡಿರುವದಾಗಿ ಅವರ ಕುಟುಂಬಸ್ಥರು ದೂರು ನೀಡಿದ್ದು, ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಿದ್ದಾಪುರ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಬಾವಿಯಿಂದ ಮೃತ ದೇಹ ಹೊರತೆಗೆದು ಸಿದ್ದಾಪುರ ಅಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ನೀಡಲಾಗಿದೆ.

ಸ್ಥಳಕ್ಕೆ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಕಾಂಗ್ರೆಸ್ ಅಲ್ಪಸಂಖ್ಯಾತ ರಾಜ್ಯ ಉಪಾಧ್ಯಕ್ಷ ಪಿ.ಸಿ ಹಸೈನಾರ್ ಹಾಜಿ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ ಅಬ್ದುಲ್ ಸಲಾಂ ಸೇರಿದಂತೆ ಮತ್ತಿತರರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.