ವೀರಾಜಪೇಟೆ, ಡಿ. 21: ವೀರಾಜಪೇಟೆಯಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ಸೇವಾ ಸಮಿತಿಯಿಂದ ತಾ. 30, 31 ಹಾಗೂ ಜನವರಿ 1 ರಂದು ಅಯ್ಯಪ್ಪ ಉತ್ಸವವನ್ನು ಆಚರಿಸಲು ಪೂರ್ವ ಸಿದ್ಧತೆ ನಡೆಸಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಶ್ಯಾಮ್ ಕುಮಾರ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಶ್ಯಾಮ್ ಕುಮಾರ್, ಮೂರು ದಿನಗಳ ಉತ್ಸವಕ್ಕೆ ಸುಮಾರು ರೂ. 4 ಲಕ್ಷ ವೆಚ್ಚ ತಗುಲಲಿದೆ. ತಾ. 30 ರಂದು ರಾತ್ರಿ ವಿಶೇಷ ಪೂಜೆ, ತಾ. 31 ರಂದು ಬೆಳಿಗ್ಗೆ ರಾತ್ರಿ ಪೂಜೆ ಜರುಗಲಿದೆ. ಜನವರಿ 1 ರಂದು ಪ್ರಾತ:ಕಾಲ 5.30 ಗಂಟೆಗೆ ಗಣಪತಿ ಹೋಮ, 9 ಗಂಟೆಗೆ ತುಲಾಭಾರ, 10 ಗಂಟೆಗೆ ಲಕ್ಷಾರ್ಚನೆ, 12.30 ಗಂಟೆಗೆ ವiಹಾ ಪೂಜಾಸೇವೆ ಅಪರಾಹ್ನ 1 ಗಂಟೆಯಿಂದ 3.30 ಗಂಟೆಯವರೆಗೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ.

ಸಮಿತಿ ಜಂಟಿ ಕಾರ್ಯದರ್ಶಿ ಡಿ.ಎಂ. ರಾಜ್‍ಕುಮಾರ್ ಮಾತನಾಡಿ, ಸಂಜೆ 6.30 ಗಂಟೆಗೆ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯಲ್ಲಿ ದೀಪಾರತಿ, ಆನೆ-ಅಂಬಾರಿ, ವಿದ್ಯುತ್ ಅಲಂಕೃತ ಮಂಟಪದಲ್ಲಿ ಅಯ್ಯಪ್ಪ ಸ್ವಾಮೀಯ ಚಲನ ವಲನವಿರುವ ವಿಗ್ರಹ, ಕೇರಳದ ಚಂಡೆ ಮದ್ದಳೆ, ಮೈಸೂರು ಬ್ಯಾಂಡ್, ದಕ್ಷಿಣ ಕನ್ನಡ ಜಿಲ್ಲೆ ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗ ಹಾಗೂ ಇತರ ಆಕರ್ಷಕ ಮನರಂಜನೆ ತಂಡಗಳು ಪಾಲ್ಗೊಳ್ಳಲಿವೆ, ಮೆರವಣಿಗೆಯು ಮಲೆತಿರಿಕೆ ಬೆಟ್ಟದಿಂದ ಪ್ರಾರಂಭಿಸಿ ತೆಲುಗರ ಬೀದಿ, ಜೈನರ ಬೀದಿ, ಫೀ.ಮಾ. ಕಾರ್ಯಪ್ಪ ರಸ್ತೆ, ಮುಖ್ಯ ರಸ್ತೆ ಮಾರ್ಗವಾಗಿ ಮೀನುಪೇಟೆಯ ಮುತ್ತಪ್ಪ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಹಿಂದಿರುಗಲಿದೆ ಎಂದರು.

ಗೋಷ್ಠಿಯಲ್ಲಿ ಸಮಿತಿಯ ಪಿ.ಕೆ. ಪ್ರದ್ಯುಮ್ನ, ಎ.ಆರ್. ಯೋಗಾನಂದ ರಾವ್ ಹಾಗೂ ಬಿ.ಕೆ. ಚಂದ್ರು ಹಾಜರಿದ್ದರು.