ಸೋಮವಾರಪೇಟೆ,ಡಿ.21: ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನ ಮಾಡಿರುವ ಯುವಕನನ್ನು ಮುಂದಿನ ಐದು ದಿನಗಳಲ್ಲಿ ಬಂಧಿಸದಿದ್ದಲ್ಲಿ ಕೊಡಗು ಬಂದ್‍ಗೆ ಕರೆ ನೀಡಲಾಗುವದು ಎಂದು ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
ಪತ್ರಿಕಾಭವನದಲ್ಲಿ ಜಿಲ್ಲಾ ದಲಿತಪರ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಜಯಪ್ಪ ಹಾನಗಲ್ ಮಾತನಾಡಿ, ಸಂವಿಧಾನ ಶಿಲ್ಪಿ ಬಾಬಾ ಅಂಬೇಡ್ಕರ್‍ರವರಿಗೆ ವಿಶ್ವವೇ ಗೌರವ ನೀಡಿದೆ. ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯ ನಗರಳ್ಳಿ ಗ್ರಾಮದ ಶ್ರೀನಾಥ್‍ಗೌಡ ಎಂಬ ಯುವಕ "ಏಕಾಂಗಿ ಹುಡುಗರು' ಎಂಬ ವಾಟ್ಸಪ್ ಗ್ರೂಪ್‍ನಲ್ಲಿ ಅಂಬೇಡ್ಕರ್‍ರವರನ್ನು ಅಶ್ಲೀಲ ಪದಗಳಿಂದ ನಿಂದಿಸಿರುವದಲ್ಲದೇ ತೀರಾ ಕೆಳಮಟ್ಟದ ಪದಗಳನ್ನು ಬಳಸಿರುವದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದರು.
ಆತನ ವಿರುದ್ಧ 18 ರಂದು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದರೂ, ಈವರೆಗೆ ಬಂಧಿಸದಿರುವದು ಖಂಡನೀಯ. ಮುಂದಿನ ಐದು ದಿನಗಳ ಒಳಗೆ ಆತನನ್ನು ಬಂಧಿಸುವದಲ್ಲದೇ, ರಾಜ್ಯದಿಂದಲೇ ಗಡೀಪಾರು ಮಾಡಬೇಕು. ಪ್ರಕರಣವನ್ನು ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಜಿಲ್ಲೆಯ ಎಲ್ಲಾ ದಲಿತಪರ ಸಂಘಟನೆಗಳ ಸಹಕಾರದೊಂದಿಗೆ ಕೊಡಗು ಬಂದ್‍ಗೆ ಕರೆ ನೀಡುವದಾಗಿ ಎಚ್ಚರಿಸಿದರು. ದಲಿತಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಬಿ.ಈ.ಜಯೇಂದ್ರ ಮಾತನಾಡಿ, ಯುವಕನನ್ನು ಕೂಡಲೇ ಬಂಧಿಸಬೇಕು, ಇಲ್ಲದಿದ್ದಲ್ಲಿ ಕುಶಾಲನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವದು ಎಂದರು.
ದಲಿತ ಸಂಘರ್ಷ ಸಮಿತಿ(ಭೀಮವಾದ)ಯ ಜಿಲ್ಲಾ ಸಂಚಾಲಕ ಕೆ.ಬಿ.ರಾಜು ಮಾತನಾಡಿ, ಏಕಾಂಗಿ ಗ್ರೂಪ್‍ನಲ್ಲಿ ಅಂಬೇಡ್ಕರ್‍ರವರನ್ನು ಅವಹೇಳನಕಾರಿಯಾಗಿ ಬಿಂಬಿಸಿರುವ ಶ್ರೀನಾಥ್‍ಗೌಡನ ಬದಲು ಗ್ರೂಪ್‍ನ ಅಡ್ಮಿನ್ ಆಗಿರುವ ನಿಖಿಲ್‍ಶೆಟ್ಟಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಅದರ ಬದಲು ಪ್ರಕರಣದ ಪ್ರಮುಖ ರೂವಾರಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಛಲವಾದಿ ಮಹಾಸಭಾದ ಜಿಲ್ಲಾ ಅಧ್ಯಕ್ಷೆ ಎಚ್.ಬಿ.ಜಯಮ್ಮ ಮಾತನಾಡಿ, ಉನ್ನತ ಶಿಕ್ಷಣ ಪಡೆದ ಯುವಕ ಶ್ರೀನಾಥ್‍ಗೌಡ ಅಶ್ಲೀಲ ಪದ ಬಳಸುವ ಮೂಲಕ ಅವಮಾನ ಮಾಡಿರುವದು ದುರಂತ ಎಂದರು.
ಗೋಷ್ಠಿಯಲ್ಲಿ ದಲಿತ ಒಕ್ಕೂಟದ ತಾಲೂಕು ಕಾರ್ಯದರ್ಶಿ ಜೆ.ಎಲ್. ಜನಾರ್ದನ್, ದಲಿತ ಮುಖಂಡರಾದ ಟಿ.ಈ.ಸುರೇಶ್, ಎಸ್.ಆರ್.ವಸಂತ ಇದ್ದರು.