ಶ್ರೀಮಂಗಲ, ಡಿ. 21: ಪೊನ್ನಂಪೇಟೆ ತಾಲೂಕು ಸೇರಿದಂತೆ ಕಾವೇರಿ ತಾಲೂಕು ರಚನೆಗೆ ಸರಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಂದ ಅಗತ್ಯ ದಾಖಲೆಗಳನ್ನು ಸರಕಾರ ಕೇಳಿದ್ದು, ಜಿಲ್ಲಾಧಿಕಾರಿಗಳು ವರದಿ ಕಳುಹಿಸಿದ ನಂತರ ರಾಜ್ಯ ಸರಕಾರ ಅಗತ್ಯ ಕ್ರಮಕೈಗೊಳ್ಳುವ ವಿಶ್ವಾಸವಿದೆ ಎಂದು ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಬೋಪಣ್ಣ ತಿಳಿಸಿದ್ದಾರೆ.

ಪೊನ್ನಂಪೇಟೆ ತಾಲೂಕು ಪುನರ್‍ಚನೆಗೆ ಆಗ್ರಹಿಸಿ ಪೊನ್ನಂಪೇಟೆಯ ಗಾಂಧಿ ಪ್ರತಿಮೆ ಎದುರು ಕಳೆದ 51 ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ನಿರತರಾದ ಪ್ರತಿಭಟನಾಕಾರರನ್ನು ಭೇಟಿಯಾಗಿ ಅವರು ಮಾತನಾಡಿದರು.

ಕಳೆದ 4-5 ತಿಂಗಳ ಹಿಂದೆ ರಾಜ್ಯದಲ್ಲಿ ಹಲವು ತಾಲೂಕು ಘೋಷಣೆಯಾಗಿತ್ತು. ಈ ಸಂದರ್ಭ ಕೊಡಗಿನ ತಾಲೂಕುಗಳು ಸೇರದೇ ಇರುವ ಬಗ್ಗೆ ತಾಲೂಕು ಹೋರಾಟ ಸಮಿತಿ ನಿಯೋಗದೊಂದಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.

ತಾಲೂಕು ರಚನೆಗೆ ಅಧಿಕಾರಿಗಳು ಸಹ ಪೂರಕವಾದ ದಾಖಲೆ-ವರದಿ ಸಲ್ಲಿಸಬೇಕಾಗಿದೆ. ಅಧಿಕಾರಿಗಳ ಸ್ಪಂದನೆ ಸಹ ಅಗತ್ಯವಾಗಿದೆ. ಸರಕಾರ ಜಿಲ್ಲಾಧಿಕಾರಿಗಳಿಂದ ಕೊಡಗಿನ ತಾಲೂಕು ರಚನೆ ಬಗ್ಗೆ ವರದಿ ಕೇಳಿದೆ ಎಂದು ಹರೀಶ್ ಬೋಪಣ್ಣ ಹೇಳಿದರು.

ಉಸ್ತುವಾರಿ ಸಚಿವರು ತಾ. 23ಕ್ಕೆ ಪೊನ್ನಂಪೇಟೆ ಕೋರ್ಟ್ ಉದ್ಘಾಟನೆಗೆ ಆಗಮಿಸಲಿದ್ದು, ತಾಲೂಕು ರಚನೆಗೆ ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಕೊಡಗಿನ ತಾಲೂಕು ರಚನೆ ಬೇಡಿಕೆ ಬಗ್ಗೆ ಈಗಾಗಲೇ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರು ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಪತ್ರ ಸಲ್ಲಿಸಿದ್ದಾರೆ. ಕೊಡಗಿನ ಜನರ ಬೇಡಿಕೆಯಂತೆ ಎರಡು ತಾಲೂಕು ರಚನೆಯಾಗುವವರೆಗೂ ಎಲ್ಲಾ ಬೆಂಬಲ ನೀಡಲಾಗುವದು. ತಾಲೂಕು ಹೋರಾಟದ ಬಗ್ಗೆ ರಾಜಕೀಯ ಮಾತು ಸರಿಯಲ್ಲ. ನಾವು ಅಧಿಕಾರಕ್ಕೆ ಬಂದರೆ ಮಾಡುತ್ತೇವೆ ಅಂದರೇ ಏನರ್ಥ. ಕಳೆದ 17 ವರ್ಷದಿಂದ ಹೋರಾಟ ಇದೆ. ಆಗ ಇವರ ಸರಕಾರ ಇತ್ತಲ್ಲ. ಆಗ ಮಾಡಬಹುದಿತ್ತಲ್ಲ ಎಂದು ಇತ್ತೀಚೆಗೆ ಈ ಕುರಿತು ಹೇಳಿಕೆ ನೀಡಿದ ಶಾಸಕರ ಹೆಸರನ್ನು ಪ್ರಸ್ತಾಪಿಸದೆ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ತಾಲೂಕು ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಮಾಚಯ್ಯ, ಸಂಚಾಲಕ ಎಂ.ಎಂ. ರವೀಂದ್ರ ಪ್ರಮುಖರಾದ ಅಡ್ಡಂಡ ಕಾರ್ಯಪ್ಪ, ಪೊಕ್ಕಳಿಚಂಡ ಪೂಣಚ್ಚ, ಎಂ.ಎಸ್. ಕುಶಾಲಪ್ಪ, ಚೆಪ್ಪುಡಿರ ಸೋಮಯ್ಯ, ಪ್ರಭಾಕರ್ ಮಾಸ್ಟರ್ ಮಾತನಾಡಿದರು.

51ನೇ ದಿನ ಪ್ರತಿಭಟನಾ ಸತ್ಯಾಗ್ರಹದಲ್ಲಿ ನಲ್ಲೂರು ಗ್ರಾಮದ ಶ್ರೀ ಗಣಪತಿ, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷ ಸೋಮೆಯಂಡ ಸ್ವಾತಿ, ಕಾರ್ಯದರ್ಶಿ ತೀತರಮಾಡ ಲತಾ, ನಲ್ಲೂರು ಶ್ರೀನಿಧಿ ಲೇಡೀಸ್ ಅಸೋಸಿಯೇಷನ್‍ನ ಅಧ್ಯಕ್ಷೆ ಮಲಚೀರ ಶ್ವೇತಾ, ಕಾರ್ಯದರ್ಶಿ ಮಲಚೀರ ಕಾವೇರಮ್ಮ, ನಲ್ಲೂರುವಿನ ಶ್ರೀನಿಧಿ ಸ್ತ್ರೀ ಶಕ್ತಿ ಸಂಘದ ಟಿ.ಟಿ. ವಿಜಯ, ಬೋಡಂಗಡ ಅಶೋಕ್, ಟಿ.ಬಿ.ಪೂವಪ್ಪ, ಗ್ರಾಮಸ್ಥರಾದ ತೀತರಮಾಡ ಕಾಶಿ ಕರುಂಬಯ್ಯ, ಪೊನ್ನಪ್ಪ, ರಮೇಶ್, ಬೋಡಂಗಡ ರಮೇಶ್, ದಿಲ್ಲನ್, ಸೋಮೆಯಂಡ ಗಣೇಶ್, ಮಲಚೀರ ಅಶೋಕ್, ಅನಿಲ್, ಗಿರೀಶ್, ತೀತರಮಾಡ ರಶ್ಮಿ, ಗೊಂಬೆ, ಜಯಂತಿ, ಪುಳ್ಳಂಗಡ ಗಣಪತಿ, ಸುರೇಶ್, ಚೆಟ್ರುಮಾಡ ಶಂಕರು, ತಾಲೂಕು ಹೋರಾಟ ಸಮಿತಿಯ ಮತ್ರಂಡ ಅಪ್ಪಚ್ಚು, ಚೆಕ್ಕೇರ ಸೋಮಯ್ಯ, ಕಾಳೇಂಗಡ ಸುಜು ಗಣಪತಿ, ಎರಮು ಹಾಜಿ, ದಯಾ ಚಂಗಪ್ಪ, ಕಾಳಿಮಾಡ ಮೋಟಯ್ಯ, ಚೆಪ್ಪುಡಿರ ಪೊನ್ನಪ್ಪ, ಕಾಟಿಮಾಡ ಜಿಮ್ಮಿ ಅಯ್ಯಣ್ಣ, ಕೋದೇಂಗಡ ವಿಠಲ, ಮುಕ್ಕಾಟಿರ ಚೋಟು ಉತ್ತಯ್ಯ ಮತ್ತಿತರರು ಹಾಜರಿದ್ದರು.