ಸೋಮವಾರಪೇಟೆ, ಡಿ. 19: ಜಿಲ್ಲೆಯಲ್ಲಿ ಈಗಾಗಲೇ 19,500ಕ್ಕೂ ಅಧಿಕ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಶೇ. 75 ರಷ್ಟು ಬಡ ಮಹಿಳೆಯರಿಗೆ ಉಚಿತ ಗ್ಯಾಸ್ ಸೌಲಭ್ಯ ದೊರಕಿದೆ. ಇದರೊಂದಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 4000 ನೂತನ ಗ್ಯಾಸ್ ಸಂಪರ್ಕ ದೊರಕಿದ್ದು, ಮುಂದಿನ ದಿನಗಳಲ್ಲಿ ಫಲಾನುಭ ವಿಗಳಿಗೆ ವಿತರಿಸಲಾಗುವದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಪ್ರಧಾನಮಂತ್ರಿಗಳ ಉಜ್ವಲ ಯೋಜನೆಯಡಿ ಆಯ್ಕೆಯಾದ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 100 ಫಲಾನುಭವಿಗಳಿಗೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಉಚಿತ ಗ್ಯಾಸ್ ಕಿಟ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ಯಾಸ್ ಸಂಪರ್ಕದ ಜೊತೆಗೆ ವಿಮೆಯನ್ನು ಕೂಡ ಕೇಂದ್ರ ಸರ್ಕಾರವೇ ಮಾಡಿರುವದು ದೇಶದ ಇತಿಹಾಸದಲ್ಲಿಯೇ ಅಪರೂಪದ ಯೋಜನೆ ಎಂದು ಬಣ್ಣಿಸಿದ ರಂಜನ್, ದೇಶದ ಯಾವದೇ ಮಹಿಳೆಯೂ ಅನಾರೋಗ್ಯದಿಂದ ಬಳಲಬಾರದು ಎಂಬ ಉದ್ದೇಶದಿಂದ ದೇಶಾದ್ಯಂತ ಉಚಿತ ಅಡುಗೆ ಅನಿಲ ಸಿಲಿಂಡರ್‍ಗಳನ್ನು ವಿತರಿಸಲು ಮುಂದಾಗುವ ಮೂಲಕ ಕೋಟ್ಯಂತರ ತಾಯಂದಿರ ಋಣ ತೀರಿಸಿದ್ದಾರೆ ಎಂದರು.
ಇಂದು ದೇಶದ 2.86 ಕೋಟಿ ಮಹಿಳೆಯರಿಗೆ ಈ ಸೌಲಭ್ಯ ದೊರಕಿದೆ. ಗುಜರಾತ್‍ನಲ್ಲಿ ಚಹಾ ಮಾರುತ್ತಿದ್ದ ಸಂದರ್ಭ ತಮ್ಮ ತಾಯಿ ಪಡುತ್ತಿದ್ದ ಕಷ್ಟ ಕಾರ್ಪಣ್ಯಗಳು ಹಾಗೂ ಮನೆಯಲ್ಲಿದ್ದ ಬಡತನವನ್ನು ಅನುಭವಿಸಿದ್ದ ಮೋದಿಯವರು, ದೇಶದ ಬಡ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಯೋಜನೆಗೆ ಉತ್ತರ ಪ್ರದೇಶದಲ್ಲಿ ಚಾಲನೆ ನೀಡಿದ್ದು, ಕೋಟ್ಯಾಂತರ ಕುಟುಂಬಗಳು ಯೋಜನೆಯ ಸವಲತ್ತು ಪಡೆದಿವೆ ಎಂದರು.
ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್, ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ, ಸದಸ್ಯರುಗಳಾದ ನಾಪಂಡ ಉಮೇಶ್ ಉತ್ತಪ್ಪ, ಎಂ.ಎನ್. ಬೆಳ್ಳಿಯಪ್ಪ, ಭಾಗೀರತಿ, ಶಾಂತಾ, ಲತೀಫ್, ಪಾರ್ವತಿ ಹೆಚ್‍ಪಿ ಗ್ಯಾಸ್ ಏಜೆನ್ಸಿ ಮಾಲೀಕ ಎಸ್.ಎ. ಮುರಳೀಧರ್, ವ್ಯವಸ್ಥಾಪಕ ಸತೀಶ್ ಇದ್ದರು.