ವೀರಾಜಪೇಟೆ, ಡಿ. 20: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆ ಎಲ್ಲ ಮೂಲ ಸೌಲಭ್ಯಗಳಿಂದ ಉನ್ನತೀಕರಣಗೊಳ್ಳುತ್ತಿದ್ದು, ತಾಲೂಕಿನಾದ್ಯಂತ ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಲ್ಲ ರೋಗಿಗಳಿಗೂ ಇಲ್ಲಿಯೇ ಚಿಕಿತ್ಸೆ ದೊರೆಯುವಂತಾಗಲಿ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯಿಂದ ನಿರ್ಮಿಸಿರುವ ಹೊಸ ಕ್ಯಾಂಟೀನ್ ಹಾಗೂ ಆಸ್ಪತ್ರೆಯಲ್ಲಿ ನೂತನ ಡಿಜಿಟಲ್ ಎಕ್ಸರೇ ಕೇಂದ್ರವನ್ನು ಉದ್ಘಾಟಿಸಿದ ಬೋಪಯ್ಯ ಅವರು, ಸುಮಾರು ರೂ. 39 ಲಕ್ಷ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸಾ ಘಟಕದ ಆಧುನೀಕರಣ, ತುರ್ತು ನಿಗಾ ಘಟಕ (ಐ.ಸಿ.ಯು) ಹಾಗೂ ಡಯಾಲಿಸಿಸ್ ಘಟಕ ಸಧ್ಯದಲ್ಲಿಯೇ ಆರಂಭಗೊಳ್ಳಲಿದ್ದು, ಮುಂದಿನ ತಿಂಗಳು ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಈ ಎಲ್ಲ ಸೌಲಭ್ಯಗಳಿಂದ ಈ ಆಸ್ಪತ್ರೆ ರಾಜ್ಯದಲ್ಲಿಯೇ ಮಾದರಿ ಆಸ್ಪತ್ರೆಯಾಗಲಿದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್, ಮುಖ್ಯ ವೈದ್ಯಾಧಿಕಾರಿ ಪಿ. ವಿಶ್ವನಾಥ್ ಶಿಂಪಿ, ಮಲ್ಲಂಡ ಮಧು ದೇವಯ್ಯ, ಆಸ್ಪತ್ರೆಯ ವೈದ್ಯರುಗಳು, ದಾದಿಯರು ಸಿಬ್ಬಂದಿಯರು ಪಾಲ್ಗೊಂಡಿದ್ದರು.