ಶ್ರೀಮಂಗಲ, ಡಿ. 16: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ಕಾಡಾನೆ ಹಿಂಡುಗಳು ಕಳೆದ 2 ದಿನದಿಂದ ಬೀಡು ಬಿಟ್ಟಿದ್ದು, ಬ್ರಹ್ಮಗಿರಿ ರಕ್ಷಿತಾರಣ್ಯದಿಂದ ಸುಮಾರು ದೂರ ಬಂದಿರುವ ಕಾಡಾನೆಗಳು ದಾರಿತಪ್ಪಿ ಗ್ರಾಮದಲ್ಲಿ ಬೆಳೆಗಳನ್ನು ನಷ್ಟಪಡಿಸಿವೆ.

ಸಾಮಾನ್ಯವಾಗಿ ಅರಣ್ಯ ಪ್ರದೇಶದ ಆಸುಪಾಸಿನಲ್ಲಿ ಕಾಡಾನೆಗಳು ನುಸುಳುವದು ಮಾಮೂಲಾಗಿದೆ. ಆದರೆ ಪೊರಾಡು ಗ್ರಾಮದ ಸುತ್ತಮುತ್ತ ಯಾವದೇ ಅರಣ್ಯ ಇಲ್ಲದಿದ್ದರೂ ಈ ಗ್ರಾಮದೊಳಗೆ ಕಾಡಾನೆ ಹಿಂಡುಗಳು ಸೇರಿಕೊಂಡಿರುವದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

ಗ್ರಾಮದ ಮೀದೇರಿರ ಸೋಮಣ್ಣ ಚಿಟ್ಯಪ್ಪ, ಮಲ್ಲೇಂಗಡ ಮುತ್ತಪ್ಪ, ಬಲ್ಯಮೀದೇರಿರ ಲೊಕೇಶ್ ಮತ್ತು ಮೀದೇರಿರ ಅಯ್ಯಪ್ಪ ಅವರ ತೋಟ ಹಾಗೂ ಮನೆಯ ಸುತ್ತಮುತ್ತ ಬೆಳೆನಷ್ಟ ಪಡಿಸಿದೆ. ಕಾಫಿ, ಸಪೋಟ, ಅಡಿಕೆ, ತೆಂಗು, ಬಾಳೆ ಇತ್ಯಾದಿ ಬೆಳೆಗಳನ್ನು ಮತ್ತು ಗಿಡಮರಗಳನ್ನು ನಷ್ಟಪಡಿಸಿವೆ. ಸ್ಥಳಕ್ಕೆ ಬ್ರಹ್ಮಗಿರಿ ಅಭಯಾರಣ್ಯದ ಬಿರುನಾಣಿ ವಿಭಾಗದ ಅರಣ್ಯ ಅಧಿಕಾರಿ ನಿಸಾರ್ ಅಹಮ್ಮದ್, ಸಿಬ್ಬಂದಿ ಅಜ್ಜಮಾಡ ಅಪ್ಪಣ್ಣ ಮತ್ತಿತರರು ಆಗಮಿಸಿ ಕಾಡಾನೆಯಿಂದ ಆದ ನಷ್ಟವನ್ನು ಪರಿಶೀಲಿಸಿದ್ದಾರೆ. ಗ್ರಾಮದಿಂದ ಕಾಡಾನೆ ಓಡಿಸಲು ಕಾರ್ಯಾಚರಣೆ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.