ಮಡಿಕೇರಿ, ಡಿ. 15: ವ್ಯಕ್ತಿಯೋರ್ವರನ್ನು ಹತೈಗೈದು ದರೋಡೆ ಮಾಡಿದ ಆರೋಪಿಗೆ ಇಲ್ಲಿನ ನ್ಯಾಯಾಲಯ ದಂಡ ಸಹಿತ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.ಕಳೆದ ತಾ. 6.08.2013ರಂದು ಉತ್ತರ ಪ್ರದೇಶದ ಲಕ್ನೋವಿನ ಬರ್ಲಾಂಪುರ ಜಿಲ್ಲೆಯ ವಾಸಿ ಅಸ್ರಾರ್ ಅಹಮದ್‍ರವರ ಮಗ ಜಿಶಾನ್ ಅಹಮ್ಮದ್ ಪಶ್ಚಿಮ ಬಂಗಾಳದ ಮೆಹದ್ನೀಪುರ್ ಜಿಲ್ಲೆ ವಾಸಿ ಶೇಕ್ ಮಮ್ಮ ರಯೀಜ್ ಆಲಿರವರ ಮಗ ಹೊದವಾಡ ಗ್ರಾಮದ ಬಿ.ಎ. ಹಂಸರವರ ಬಾಡಿಗೆ ಮನೆಯಲ್ಲಿ ವಾಸವಿದ್ದು, ಇಬ್ಬರೂ ಸೇರಿ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿಗೆ ಸೇರಿದ ಆವಂದೂರು ಗ್ರಾಮದಲ್ಲಿ ಬಲರಾಮ್ ಅವರ ಮನೆಯ ಹೊರೆಗೆ ಅವರ ಸ್ನೇಹಿತ ರಾಜಾರಾವ್ ಕದಂ ಅವರನ್ನು ಕೊಲೆ ಮಾಡಿ ಮನೆಯೊಳಗಿದ್ದ ಬಲರಾಮ್‍ರವರಿಗೆ ಇಬ್ಬರೂ ಆರೋಪಿಗಳು ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯವನ್ನುಂಟು ಮಾಡಿ ಅವರ ಮನೆಯ ಅಲ್ಮೇರಾ ಹೊಡೆದು ರೂ. 10 ಮುಖಬೆಲೆಯ 100 ನಾಣ್ಯಗಳನ್ನು ಹಾಗೂ ಎರಡು ಮೊಬೈಲ್‍ಗಳು ಮತ್ತು ಶರ್ಟ್ ಜೇಬಿನಿಂದ ರೂ. 500 ಗಳನ್ನು ದೋಚಿಕೊಂಡು ಹೋಗಿರುತ್ತಾರೆ ಎಂದು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರರೆ ದೂರು ದಾಖಲಾಗಿತ್ತು. ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿ ಸಂಖ್ಯೆ 2 ಈತನು ಅಪ್ರಾಪ್ತ ವಯಸ್ಕನೆಂದು ಕಂಡು ಬಂದಿರುವದರಿಂದ ಆತನ ಪ್ರಕರಣವನ್ನು ಬಾಲಾಪರಾಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ಮಾಡಲಾಗುತ್ತಿದೆ.

ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರುಗಳಾದ ಆರ್.ಕೆ.ಜೆ.ಎಂ.ಎಂ. ಮಹಾಸ್ವಾಮೀಜಿ ಜಿಶಾನ್‍ಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಕೊಲೆ ಮಾಡಿದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಯನ್ನು ಮತ್ತು ರೂ. 5000 ದಂಡ, ದರೋಡೆ ಮಾಡಿದ ಅಪರಾಧಕ್ಕಾಗಿ 10 ವರ್ಷಗಳ ಕಾರಾಗೃಹ ವಾಸ ಮತ್ತು ರೂ. 2000 ದಂಡ, ಒಂದು ಕೊಲೆ ಕೃತ್ಯವನ್ನು ಎಸಗಿ, ಕೊಲೆ ಯತ್ನ ಮಾಡಿ ದರೋಡೆ ಮಾಡಿದ ಅಪರಾಧಕ್ಕಾಗಿ 7 ವರ್ಷಗಳ ಕಾರಾಗೃಹ ವಾಸ ಮತ್ತು ರೂ. 2000 ದಂಡ ಹಾಗೂ ಕೊಲೆ ಮಾಡಲು ಯತ್ನಿಸಿದ ಅಪರಾಧಕ್ಕಾಗಿ 10 ವರ್ಷಗಳ ಕಾರಾಗೃಹ ವಾಸ ಮತ್ತು ರೂ. 2000 ದಂಡವನ್ನು ಪಾವತಿಸುವಂತೆ ತೀರ್ಪು ನೀಡಿರುತ್ತಾರೆ. ಎಲ್ಲಾ ಕಾರಾಗೃಹ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸುವಂತೆ ತಿಳಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ಸರ್ಕಾರಿ ಅಭಿಯೋಜಕ ಎ.ಪಿ. ಫಿರೋಜ್‍ಖಾನ್ ನಡೆಸಿರುತ್ತಾರೆ.