ಮಡಿಕೇರಿ, ಡಿ. 12: ಜಿಲ್ಲಾ ಆಸ್ಪತ್ರೆಯಲ್ಲಿ ದಿನಗೂಲಿ ನೌಕರರಾಗಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ವೇತನ ನೀಡುವಂತೆ ನಗರದ ಜಿಲ್ಲಾ ಆಸ್ಪತ್ರೆಯ ನೌಕರರು ಪ್ರತಿಭಟನೆ ನಡೆಸಿದರು.ಹಲವು ತಿಂಗಳುಗಳಿಂದ ವೇತನದ ಸಮಸ್ಯೆ ಕಾಡುತ್ತಿದೆ. ಪಿ.ಎಫ್ ಬಗ್ಗೆ ಮಾಹಿತಿಯೇ ಇಲ್ಲ. ದಿನದ ದುಡಿಮೆಗೆ ಬೆಲೆ ಇಲ್ಲದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ವೇತನ ನೀಡುವ ವ್ಯವಸ್ಥೆಯಾಗದೇ ಕೆಲಸಕ್ಕೆ ಹಾಜರಾಗುವದಿಲ್ಲ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಕಾರ್ಮಿಕ ಅಧಿಕಾರಿಗಳು ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಜೆಡಿಎಸ್ ಮುಖಂಡ ಭರತ್ ಆಸ್ಪತ್ರೆಯಲ್ಲಿ ಇನ್ನೂರಕ್ಕಿಂತ ಹೆಚ್ಚು ದಿನಗೂಲಿ ನೌಕರರು ದುಡಿಯುತ್ತಿದ್ದಾರೆ. ಇವರಿಗೆ ನೀಡುವ ಸಂಬಳದಲ್ಲಿ ವ್ಯತ್ಯಾಸವಿದೆ. ಕಾರ್ಮಿಕ ಇಲಾಖೆ ನಿಯಮದಂತೆ 11 ಸಾವಿರ ವೇತನ ಸಿಗಬೇಕು, ಆದರೆ 6,000 ರೂ. ಮಾತ್ರ ಮೈಸೂರು ಖಾಸಗಿ ಹೊರಗುತ್ತಿಗೆ ಸಂಸ್ಥೆಯವರು ನೀಡುತ್ತಿದ್ದಾರೆ, ಸಂಬಳವನ್ನು 2-3 ತಿಂಗಳಿಗೆ ನೀಡುವದರಿಂದ ದಿನಗೂಲಿ ನೌಕರರು ಜೀವನ ನಡೆಸುವದು ಕಷ್ಟವಾಗಿದೆ. ಇಂದಿನ ಬೆಲೆ ಏರಿಕೆ ದಿನದಲ್ಲಿ ಈಗ ನೀಡುತ್ತಿರುವ ಸಂಬಳ ಸಾಕಾಗುವದಿಲ್ಲ. ವೇತನ ಹೆಚ್ಚಳ ಮಾಡಬೇಕು. ಇದರೊಂದಿಗೆ ಇಎಸ್‍ಐ, ಪಿ.ಎಫ್. ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಕೃಷ್ಣ ಮಾತನಾಡಿ, ದಿನಗೂಲಿ ನೌಕರರಿಗೆ ಸರ್ಕಾರದಿಂದ ಬರುವ ಪೂರ್ತಿ ಹಣ ಸಲ್ಲಬೇಕು. ಗುತ್ತಿಗೆದಾರರು ಈ ಹಿಂದೆ ಕಡಿತಗೊಳಿಸಿರುವ ಹಣವನ್ನು ಇನ್ನೆರಡು ದಿನದಲ್ಲಿ ನೀಡದಿದ್ದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭ ಜಿಲ್ಲಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಅಬ್ದುಲ್ ಅಜೀಜ್, ಕೊಡಗು ವೈದ್ಯಕೀಯ ಕಾಲೇಜಿನ ಮೇಲ್ವಿಚಾರಕಿ ಮೇರಿ ನಾಣಯ್ಯ, ನಿರ್ದೇಶಕ ಕಾರ್ಯಪ್ಪ, ಮೈಸೂರು ಖಾಸಗಿ ಹೊರಗುತ್ತಿಗೆದಾರ ಸಂಸ್ಥೆಯ ಸದಾಶಿವಪ್ಪ ಹಾಜರಿದ್ದರು.