ಸೋಮವಾರಪೇಟೆ, ಡಿ. 10: ಜಿಲ್ಲೆಯ ಪವಿತ್ರ ಧಾರ್ಮಿಕ ಕ್ಷೇತ್ರ ತಲಕಾವೇರಿ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿಗೆ ಆಯ್ಕೆ ಮಾಡಲಾಗಿರುವ ಸಮಿತಿಯನ್ನು ವಿಸರ್ಜಿಸಬೇಕೆಂದು ಇಲ್ಲಿನ ಕೊಡವ ಸಮಾಜ ಆಗ್ರಹಿಸಿದೆ.

ಸೋಮವಾರಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಅಧ್ಯಕ್ಷ ಮಾಳೇಟಿರ ಅಭಿಮನ್ಯು ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಸರ್ಕಾರದ ಆದೇಶವನ್ನು ಖಂಡಿಸಲಾಯಿತು.

ದೇವಾಲಯ ಸಮಿತಿಗೆ ಸದಸ್ಯರ ಪಟ್ಟಿಯಲ್ಲಿ ಕೊಡವರಿಗೆ ಪ್ರಾಮುಖ್ಯತೆ ಕಡಿಮೆಯಿದ್ದು ಹೊರ ಜಿಲ್ಲೆಯವರನ್ನು ಸಮಿತಿ ಸದಸ್ಯರಾಗಿ ತೆಗೆದು ಕೊಂಡಿರುವ ಕ್ರಮ ಸರಿಯಿಲ್ಲ. ಕೊಡವರ ಕುಲದೇವತೆ ಕಾವೇರಿ ಮಾತೆಯ ಸೇವೆ ಮಾಡುತ್ತಿರುವವರಿಗೆ ಅವಕಾಶ ನೀಡದಿರುವದು ದುರದೃಷ್ಟಕರ. ನಾಮಕಾವಸ್ಥೆಗೆ ಒಂದಿಬ್ಬರಿಗೆ ಅವಕಾಶ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸದರಿ ಸಮಿತಿಯನ್ನು ವಿಸರ್ಜಿಸಿ, ಹೊಸದಾಗಿ ಸಮಿತಿ ರಚಿಸಬೇಕು. ತಪ್ಪಿದಲ್ಲಿ ಕಾನೂನು ಹೋರಾಟ ನಡೆಸುವದಾಗಿ ಅಭಿಮನ್ಯು ಕುಮಾರ್ ಹೇಳಿದರು. ಸಭೆಯಲ್ಲಿ ಸಮಾಜದ ಉಪಾಧ್ಯಕ್ಷ ಬಾಚಿನಾಡಂಡ ಪೂಣಚ್ಚ, ಸಹ ಕಾರ್ಯದರ್ಶಿ ತೇಲಪಂಡ ಕವನ್ ಕಾರ್ಯಪ್ಪ, ನಿರ್ದೇಶಕರುಗಳಾದ ಆಪಾಡಂಡ ವೀರರಾಜು, ಮಣವಟ್ಟಿರ ಹರೀಶ್ ಐಯ್ಯಣ್ಣ, ನಾಪಂಡ ಕುಶಾಲಪ್ಪ, ಮೈನಾ ಸುಬ್ರಮಣಿ, ಮೋಟನಾಳಿರ ಲವಿ ಉಪಸ್ಥಿತರಿದ್ದರು.